ಬೆಳ್ತಂಗಡಿ, ಆ.02(Daijiworld News/SS): ವ್ಯಕ್ತಿಯೋರ್ವರು ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ಬೈಕ್ ಚಾಲನೆ ಮಾಡುತ್ತಿದ್ದಾಗ, ಸಹ ಸವಾರಿಣಿಯ ಬಟ್ಟೆ ಬೈಕ್'ನ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಬೆಳ್ತಂಗಡಿ ನಿವಾಸಿ ಬಿ.ಪಾತಿಮ ಮೃತ ಮಹಿಳೆ. ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ಗೋವಿಂದೂರು ಬಸ್ಸು ನಿಲ್ದಾಣದ ಬಳಿಯಿರುವ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಸವಾರ ರಾಝೀಕ್ ಎಂಬಾತ ಬಿ.ಪಾತಿಮ ಎಂಬವರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದಾರೆ. ಪರಿಣಾಮ ಸಹ ಸವಾರಿಣಿಯ ಬಟ್ಟೆ ಬೈಕ್'ನ ಹಿಂಬದಿ ಚಕ್ರಕ್ಕೆ ಸಿಲುಕಿ ಬೈಕಿನಿಂದ ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು. ಗಾಯಗೊಂಡ ಮಹಿಳೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಬೆಳ್ತಂಗಡಿ ಕಣಿಯೂರು ನಿವಾಸಿ ಅಬುಬ್ಬಕ್ಕರ್ ಸಿದ್ದೀಕ್ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.