ಬಂಟ್ವಾಳ, ಆ 01 (Daijiworld News/SM): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಗುರುವಾರ ಬಂಟ್ವಾಳ ತಾಲೂಕಿನ ಕಕ್ಯಪದವಿನಲ್ಲಿ ನಡೆದಿದೆ.
ಕಕ್ಯಪದವು ಜ್ಯುವೆಲ್ಲರಿ ಮಾಲಕ ಯೋಗೀಶ ಆಚಾರ್ಯ(35) ಎಂಬಾತ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಜು. 31ರಂದು ಸಂಜೆ ಬಾಲಕಿ ಆರೋಪಿಯ ಅಂಗಡಿಗೆ ಬಂದಿದ್ದ ಸಂದರ್ಭ ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ.
ಘಟನೆಯ ಬಳಿಕ ಬಾಲಕಿ ಮನೆಗೆ ಅಳುತ್ತಾ ತೆರಳಿದ್ದಳು. ಮನೆ ಮಂದಿ ವಿಚಾರಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿತ್ತು ಎಂದು ತಿಳಿಸಲಾಗಿದೆ. ಈ ಬಗ್ಗೆ ಗುರುವಾರ ಬಾಲಕಿಯ ತಾಯಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುಂಜಾಲಕಟ್ಟೆ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.