ಬೆಂಗಳೂರು ಡಿ 18 : ಸುಳ್ಳು ಬಿಜೆಪಿಯವರ ಮನೆದೇವರು. ಅಧಿಕಾರದಲ್ಲಿ ಇದ್ದಾಗ ಜನೋಪಯೋಗಿ ಕೆಲಸ ಮಾಡದೆ ಈಗ ಬಿಜೆಪಿ ಸುಳ್ಳು ಹೇಳೆಕೊಂಡು ಸುತ್ತಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಯಡಿಯೂರಪ್ಪ ಯಾಕೋ ಅಧಿಕಾರದ ಕನಸು ಕಾಣುತ್ತಾ ಗಾಳಿಯಲ್ಲಿ ಗೋಪುರ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಏಕವಚನದಲ್ಲಿ ಟೀಕಿಸಿದರೆ ನಾನು ಹೆದರಿಕೊಳ್ಳಬಹುದು ಎಂದು ಯಡಿಯೂರಪ್ಪ ಭಾವಿಸಿದ್ದಾರೆ. ಯಡಿಯೂರಪ್ಪ ಅಂತಹವರು ನೂರು ಮಂದಿ ಬಂದರೂ ಹೆದರಿಸಲಾಗದು ಎಂದು ಹೇಳಿದರು. ಅಧಿಕಾರದಲ್ಲಿ ಇದ್ದಾಗ ಜನರಿಗಾಗಿ ಏನೂ ಮಾಡಿಲ್ಲ, ಆದರೆ, ಸುಳ್ಳು ಹೇಳಿ ಜನರನ್ನು ನಂಬಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಸಭೆಯೊಂದರಲ್ಲಿ ಹೇಳಿದ್ದಾರೆ. ಸುಳ್ಳು ಹೇಳುವವರ ಕೈಗೆ ಅಧಿಕಾರ ಕೊಡಬೇಕೇ ? ಎಂಬುದನ್ನು ಯೋಚಿಸಿ ಎಂದು ಸಿಎಂ ಮನವಿ ಮಾಡಿದರು. ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುದಿಲ್ಲ ಎಂದು ಖಾತ್ರಿ ಇರೋದ್ರಿಂದಲೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕದಲ್ಲಿ ಕೋಮು ಭಾವನೆ ಕೆರಳಿಸಿ ಗಲಾಟೆ ಆಗುವಂತೆ ನೋಡಿಕೊಳ್ಳಬೇಕೆಂದು ಹೇಳಿದ್ದಾರೆ. ಇದನ್ನು ಸರಿಯಾಗಿ ಸಂಸದ ಪ್ರತಾಪ್ ಸಿಂಹ ಸೇರಿ ಇತರರು ಪಾಲಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ್, ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತಿತರರು ಉಪಸ್ಥಿತರಿದ್ದರು.