ಕಾಸರಗೋಡು, ಆ 01 (DaijiworldNews/SM): ಭೂಕುಸಿತದಿಂದಾಗಿ ಸಂಚಾರ ನಿಷೇಧಿಸಲಾಗಿದ್ದ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ಭಾಗಶಃ ವಾಹನ ಸಂಚಾರ ಆರಂಭಿಸಲು ಅನುಮತಿ ನೀಡಲಾಗಿದೆ. ಬದಿಯಡ್ಕ-ಪೆರ್ಲ ನಡುವಿನ ಕರಿಂಬಿಲದಲ್ಲಿ ಭೂಕುಸಿತದ ಹಿನ್ನಲೆಯಲ್ಲಿ ಕಳೆದ ಹತ್ತು ದಿನಗಳಿಂದ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಘನ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸರಕು ವಾಹನಗಳಿಗೆ ನಿಷೇಧ ಮುಂದುವರಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆ ವರೆಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್ ಗಳಲ್ಲಿ ಮಹಿಳೆಯರು, ಮಕ್ಕಳು ಮತ್ತು ರೋಗಿಗಳು ಕುಳಿತು ಸಂಚಾರ ನಡೆಸಬಹುದು. ಆದರೆ ಇತರ ಪ್ರಯಾಣಿಕರು ಭೂಕುಸಿತದ ಭಾಗದಲ್ಲಿ ಇಳಿದು ಇನ್ನೊಂದು ಭಾಗಕ್ಕೆ ನಡೆದುಕೊಂಡು ಬಂದು ಮತ್ತೆ ಬಸ್ಸು ಹತ್ತಬೇಕು ಎಂದು ಆದೇಶ ಮಾಡಲಾಗಿದೆ.
ಸಂಚಾರ ನಿಯಂತ್ರಣದ ಹೊಣೆಯನ್ನು ಪೊಲೀಸ್ ಮತ್ತು ರಸ್ತೆ ಸಾರಿಗೆ ಅಧಿಕಾರಿಗೆ ನೀಡಲಾಗಿದೆ. ಲಘು ವಾಹನಗಳ ಸಹಿತ ವಾಹನಗಳು ವೇಗ ಕಡಿತಗೊಳಿಸಿ ಸಂಚಾರ ನಡೆಸಬೇಕು. ಗುಡ್ಡದಿಂದ ಮಣ್ಣು ಕುಸಿತದ ಭೀತಿ ಹಾಗಯೇ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಅಧ್ಯಯನ ನಡೆಸುವ ನಿಟ್ಟಿನಲ್ಲಿ ನ್ಯಾಷನಲ್ ಸೆಂಟರ್ ಫಾರ್ ಅರ್ಥ್ ಸಯನ್ಸ್ ನ ಪರಿಣತರ ಸೇವೆ ಲಭ್ಯತೆ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಇನ್ನು ಈ ನಡುವೆ ಮಳೆ ಮತ್ತೆ ಬಿರುಸುಗೊಂಡಲ್ಲಿ ಸಂಚಾರ ಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.