ಉಡುಪಿ, ಆ.01(Daijiworld News/SS): ಸರ್ಕಾರದ 60 ದಿನಗಳ ಮೀನುಗಾರಿಕೆ ನಿಷೇಧದ ಅವಧಿ ಮುಗಿದಿದ್ದು, ಸರಕಾರದ ಆದೇಶದ ಪ್ರಕಾರ ಇಂದಿನಿಂದ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ಇರುವುದರಿಂದ ಕಡಲ ಮಕ್ಕಳು ಸಮುದ್ರಕ್ಕೆ ಇಳಿಯಲು ಸಜ್ಜಾಗಿದ್ದಾರೆ.
ಯಾಂತ್ರೀಕೃತ ಮೀನುಗಾರಿಕೆಗೆ ಹೇರಲಾದ ನಿಷೇಧ ಜು.31ಕ್ಕೆ ಅಂತ್ಯವಾಗಿದ್ದು, ಆ.1ರಿಂದ ಮತ್ತೆ ಮೀನುಗಾರಿಕೆ ಚಟುವಟಿಕೆಗಳು ಆರಂಭಗೊಳ್ಳಲಿವೆ. ಮಲ್ಪೆ ಮೀನುಗಾರಿಕೆ ಬಂದರಿಗೆ ಸಂಬಂಧಿಸಿದಂತೆ ಸ್ಥಳೀಯ ಮಾರಿ ಹಬ್ಬ ಹಾಗೂ ಆ.5ರಂದು ನಾಗರ ಪಂಚಮಿ ಇರುವ ಕಾರಣ ಆ.6ರಂದು ಕಡಲಿಗಿಳಿಯಲು ಮಲ್ಪೆ ಮೀನುಗಾರರು ನಿರ್ಧರಿಸಿದ್ದಾರೆ.
ಮೀನುಗಾರಿಕೆ ನಿಷೇಧ ಪರಿಣಾಮ ಕಳೆದ ಒಂದು ತಿಂಗಳಿನಿಂದ ಮಾರುಕಟ್ಟೆಯಲ್ಲಿ ಬೇಕಾದ ಮೀನುಗಳು ಸಿಗುತ್ತಿರಲಿಲ್ಲ. ಈಗ ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗುತ್ತಿದ್ದು ಆಳ ಸಮುದ್ರದ ಮೀನುಗಾರಿಕೆ ನಡೆಸಬಹುದು. ಪ್ರಸ್ತುತ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಯಾಂತ್ರೀಕೃತ ಟ್ರಾಲ್ಬೋಟುಗಳು, 1,000 ಆಳಸಮುದ್ರ ಬೋಟುಗಳು, 500 ತ್ರಿಸೆವೆಂಟಿ, 145 ಪರ್ಸೀನ್ ಬೋಟ್ಗಳು ಹಾಗೂ ಸುಮಾರು 250ರಷ್ಟು ಸಣ್ಣ ಟ್ರಾಲ್ಬೋಟ್ಗಳಿವೆ.
ಕರ್ನಾಟಕ ಕರಾವಳಿ ಮೀನುಗಾರಿಕೆ ಕಾಯ್ದೆ 1986ರನ್ವಯ ಜೂ.1ರಿಂದ ಜು.31ರ ತನಕ 61 ದಿನ ಸಾಂಪ್ರದಾಯಿಕ ಮೀನುಗಾರಿಕೆ ನಿಷೇಧಿಸಿ ಮೀನುಗಾರಿಕಾ ಇಲಾಖೆಯು ಪ್ರತೀ ವರ್ಷ ಆದೇಶ ಹೊರಡಿಸುತ್ತದೆ. ಇದೀಗ ಮೀನುಗಾರಿಕೆ ನಿಷೇಧ ಅಂತ್ಯವಾಗಿರುವುದರಿಂದ ಹೊಸ ಹುರುಪಿನೊಂದಿಗೆ ಕಡಲ ಮಕ್ಕಳು ಮತ್ಸ್ಯಬೇಟೆಗೆ ಸಿದ್ಧರಾಗಿದ್ದಾರೆ.