ಮಂಗಳೂರು, ಆ.01(Daijiworld News/SS): ಡೆಂಗ್ಯೂ ರೋಗದ ನಿವಾರಣೆಗಾಗಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಜತೆ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕೂಡ ಕೈಜೋಡಿಸಲಿದ್ದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಡೆಂಗ್ಯೂ ಜ್ವರ ಹರಡಿರುವ ಹಿನ್ನೆಲೆಯಲ್ಲಿ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಮಂಗಳೂರು ಶಾಖೆ ವತಿಯಿಂದ ಬಿಪಿಎಲ್ ಕಾರ್ಡ್ ಹೊಂದಿದ ಬಡ ಡೆಂಗ್ಯೂ ರೋಗಿಗಳಿಗೆ ಉಚಿತ ಪ್ಲೇಟ್ಲೆಟ್ ವಿತರಿಸಲಾಗುವುದು. ಇತರ ಕಾರ್ಡ್ದಾರರಿಗೆ 200 ರೂ. ದರದಲ್ಲಿ ನೀಡಲಾಗುವುದು. ಜೊತೆಗೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ರೋಗದ ನಿವಾರಣೆಗಾಗಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದ ಜತೆ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕೂಡ ಕೈಜೋಡಿಸಲಿದ್ದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ವತಿಯಿಂದ ಗುಜ್ಜರಕೆರೆ ಮತ್ತು ಬೋಳಾರ ಪರಿಸರದಲ್ಲಿ ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರೆಡ್ಕ್ರಾಸ್ ಯುವ ಸ್ವಯಂಸೇವಕರು ನಗರದ ಗುಜ್ಜರಕೆರೆ, ಜೆಪ್ಪು, ಬೋಳಾರ, ನಂತೂರು, ರೊಸಾರಿಯೋ ಪ್ರೌಢಶಾಲೆ, ಪಾಂಡೇಶ್ವರ, ಬಂದರು, ಪಳ್ನೀರು, ಬಲ್ಲಾಳ್ಬಾಗ್, ಬಿಜೈ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಹಮ್ಮಿಕೊಂಡ ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿಯೂ ರೆಡ್ಕ್ರಾಸ್ ಪಾಲ್ಗೊಂಡಿದೆ. ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ರೆಡ್ಕ್ರಾಸ್ ಸೊಸೈಟಿ ಬ್ಲಡ್ಬ್ಯಾಂಕ್ನಿಂದ ಉಚಿತ ರಕ್ತ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.