ಮಂಗಳೂರು, ಜು 31(Daijiworld News/MSP): ಮಂಗಳೂರಿಗೆ ಆಗಮಿಸಿ ಸೋಮವಾರದ ಧಿಡೀರ್ ನಾಪತ್ತೆಯಾಗಿದ್ದ ವಿ.ಜಿ.ಸಿದ್ಧಾರ್ಥ್ ಅವರ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ, ಸ್ಥಳೀಯ ಜನಪ್ರತಿನಿಧಿಯಾಗಿ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಮತ್ತು ಅವರ ಸಹೋದರ ಡಾ. ಯು ಟಿ ಇಫ್ತಿಕರ್ ಅವರು ನೀಡಿದ ಮಾರ್ಗದರ್ಶನ ಇದೀಗ ಜನಮೆಚ್ಚುಗೆ ಕಾರಣವಾಗಿದೆ.
ಯು ಟಿ ಇಫ್ತಿಕರ್ ಸ್ವತಃ ಒಬ್ಬ ವೈದ್ಯರಾಗಿದ್ದು, ವಿ.ಜಿ.ಸಿದ್ಧಾರ್ಥ್ ಅವರು ಕಾಣೆಯಾದ ಬಳಿಕ ಸತತ ಎರಡು ದಿನ ಸಿದ್ದಾರ್ಥ್ ಕಾಣೆಯಾದ ಸ್ಥಳದಲ್ಲಿ ಬೀಡುಬಿಟ್ಟು ಹುಡುಕಾಟಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.
ಸ್ಥಳೀಯ ನಿವಾಸಿಯಾಗಿರುವ ಕಾರಣ ನೀರಿನ ಹರಿವಿನ ಬಗ್ಗೆ ಅರಿವಿರುವ ಅವರು ಶೋಧ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಾ ಹಾಗೂ ಶೋಧ ಕಾರ್ಯದಲ್ಲಿ ಭಾಗವಹಿಸಿದ ಸಿಬ್ಬಂದಿಗಳಿಗೆ ತಮ್ಮ ತಮ್ಮ ಆರೋಗ್ಯ ಬಗ್ಗೆಯೂ ಕಾಳಜಿ ವಹಿಸಿ ಎಂದು ಸೂಚನೆ ಮತ್ತು ಸಲಹೆ ನೀಡುತ್ತಾ ಶೋಧ ಕಾರ್ಯ ತಂಡದೊಂದಿಗೆ ರಾತ್ರಿ ಹಗಲೆನ್ನದೆ ಎರಡೂ ದಿನಗಳ ಕಾಲ ಕಳೆದು ಸಿದ್ದಾರ್ಥ್ ಅವರ ಹುಡುಕಾಟಕ್ಕಾಗಿ ಶ್ರಮಿಸಿದ್ದರು.
ಇಷ್ಟೇ ಅಲ್ಲದೆ ಸಹೋದರಿಬ್ಬರೂ ಸಿದ್ದಾರ್ಥ್ ಮೃತದೇಹ ಪತ್ತೆಯಾಗಿ ಮರಣೋತ್ತರ ಪರೀಕ್ಷೆಯ ವೇಳೆಯೂ ಹಾಜರಿದ್ದು, ಸ್ನೇಹಿತನ ಅಗಲಿಕೆಗೆ ಕಂಬನಿ ಮಿಡಿದಿದ್ದರು. ವೆನ್ ಲಾಕ್ ಆಸ್ಪತ್ರೆಯಲ್ಲೂ ಖುದ್ದು ನಿಂತು ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಸಿದ್ದಾರ್ಥ್ ಅವರ ಪಾರ್ಥಿವ ಶರೀರ ವೆನ್ಲಾಕ್ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಮರಣೋತ್ತರ ಪರೀಕ್ಷೆ ನಡೆಸುವ ಕೊಠಡಿಯ ಮುಂದೆ ಸಾವಿರಾರು ಜನರು ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದ್ದರು. ಈ ಸಂದರ್ಭ ಅಲ್ಲಿಗೆ ಬಂದಿದ್ದ ಎರಡು ಕುಟುಂಬಗಳು ತಮ್ಮ ಸಂಬಂಧಿಕರ ಮೃತದೇಹಗಳೊಂದಿಗೆ ದಿಕ್ಕೆತೋಚದಂತಾಗಿ ಜನ ಸಮೂಹದ ಮಧ್ಯೆ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಶಾಸಕ ಯು.ಟಿ ಖಾದರ್ ಅವರ ಕಡೆಗೆ ಧಾವಿಸಿ ಅವರ ಸಮಸ್ಯೆಗೆ ಸ್ಪಂದಿಸಿ, ಬಡ ಕುಟುಂಬಗಳ ಕೇಸ್ ಕೂಡಾ ತ್ವರಿತವಾಗಿ ನಿರ್ವಹಿಸುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಒಟ್ಟಾರೆ ಸಹೋದರರಾದ ಶಾಸಕ ಯು.ಟಿ.ಖಾದರ್ ಮತ್ತು ಡಾ. ಯು.ಟಿ ಇಫ್ತಿಕರ್ ಅವರ ಮಾನವೀಯತೆಯ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.