ಹೊನ್ನಾವರ ಡಿ 18: ಇಲ್ಲಿನ ಮಾಗೋಡಿನ ಶಾಲಾ ಬಾಲಕಿ ಕಾವ್ಯಾಳ ಮೇಲೆ ಚಾಕುವಿನಿಂದ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಾಲಕಿಯೇ ಕೈಗೆ ಮುಳ್ಳನ್ನು ಚುಚ್ಚಿಕೊಂಡು ಸುಳ್ಳು ಸುದ್ದಿ ಹರಿಡಿದ್ದಾಳೆ ಎಂದು ತಿಳಿದು ಬಂದಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ ನೀಡಿದ್ದು, 'ಬಾಲಕಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿವಿಧ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಮಾಡಲಾಗಿದೆ. ನೊಂದ ಶಾಲಾ ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿಚಾರಣೆ ಮಾಡಿದಾಗ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ' ಎನ್ನುವ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. "ಬಾಲಕಿಯು ಮನೆಯಿಂದ ಸುಮಾರು 8 ಕಿ.ಮೀ. ದೂರದ ಸಂಶಿ ಶಾಲೆಗೆ ಕಾಡಿನ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಪ್ರತಿನಿತ್ಯ ತೆರಳುತ್ತಿದ್ದಳು. ಈ ವೇಳೆ ಅದೇ ಗ್ರಾಮದ ಯುವಕನೊಬ್ಬ ಪ್ರತಿನಿತ್ಯ ತನ್ನೊಂದಿಗೆ ಬೈಕ್ ನಲ್ಲಿ ಬರುವಂತೆ ಬಲವಂತ ಪಡಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ನೊಂದ ಬಾಲಕಿ ಕೈಗಳಿಗೆ ಗಾಯಗಳನ್ನು ಮಾಡಿದ್ದಾಳೆ ಎನ್ನುವ ಮಾಹಿತಿ ವಿಚಾರಣೆಯಿಂದ ಬಹಿರಂಗಗೊಂಡಿದೆ.