ಮಂಗಳೂರು, ಜು31(Daijiworld News/SS): ವಿಜಿ ಸಿದ್ಧಾರ್ಥ್ ಅವರ ಸಾವಿನಿಂದಾಗಿ ತೀವ್ರ ದುಃಖವಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸಿದ್ಧಾರ್ಥ್ ಮೃತದೇಹ ಪತ್ತೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಖಾದರ್, ಇದು ಅತ್ಯಂತ ನೋವಿನ ಸಂಗತಿ ಹಾಗೂ ಬಹಳ ಬೇಸರವಾಗುತ್ತಿದೆ. ಸಿದ್ಧಾರ್ಥ್ ಅವರು ಈ ರೀತಿ ನಮಗೆ ಸಿಕ್ಕಿದ್ದು ಬಹಳ ನೋವಾಗಿದೆ. ಮೊದಲು ಸಿದ್ಧಾರ್ಥ್ ಮೃತದೇಹವನ್ನು ಸ್ಥಳೀಯರು ನೋಡಿದ್ದಾರೆ. ಮೃತದೇಹವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂಬುದು ಚರ್ಚೆ ಮಾಡುತ್ತೇವೆ. ಅದಕ್ಕೂ ಮೊದಲು ಕೆಲವು ಪ್ರಕ್ರಿಯೆ ಇದೆ. ಅದನ್ನು ಮುಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸಿದ್ಧಾರ್ಥ್ ಅವರ ನಾಪತ್ತೆ ಕುರಿತು ಗೊಂದಲ ಇತ್ತು. ಅವರು ಬದುಕಿರಬಹುದು ಎಂದು ನಮಗೆ ಆಶಾಭಾವನೆ ಇತ್ತು. ಆದರೆ ಬುಧವಾರ ಬೆಳಗ್ಗೆ ಸ್ಥಳೀಯ ಮೀನುಗಾರರು ಮೃತದೇಹವನ್ನು ಪತ್ತೆಹಚ್ಚಿ ದಡಕ್ಕೆ ತಂದಿದ್ದಾರೆ. ಈಗಾಗಲೇ ಮಾಜಿ ಸಿಎಂ ಎಸ್.ಎಂ. ಕೃಷ್ಣ ಮತ್ತು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಅವರು ಅಂತ್ಯಕ್ರಿಯೆ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಖಾದರ್ ತಿಳಿಸಿದರು.
ಸೋಮವಾರ ರಾತ್ರಿ ಮಂಗಳೂರು ಸಮೀಪದ ನೇತ್ರಾವತಿ ನದಿ ಸೇತುವೆ ಬಳಿಯಿಂದ ನಿಗೂಢವಾಗಿ ಕಾಣೆಯಾಗಿದ್ದ ಸಿದ್ಧಾರ್ಥ್ ಅವರ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ಸರಿಸುಮಾರು 36 ಗಂಟೆಗಳ ತೀವ್ರ ಶೋಧದ ನಂತರ ಹೊಗೈ ಬಜಾರ್ನ ಅಳಿವೆ (ನದಿ ಮತ್ತು ಸಮುದ್ರ ಸೇರುವ ಸ್ಥಳ) ಬಾಗಿಲ ಬಳಿ ಬುಧವಾರ ಬೆಳಗ್ಗೆ 6.30ಕ್ಕೆ ಸಿದ್ದಾರ್ಥ್ ಅವರ ಮೃತದೇಹ ಪತ್ತೆಯಾಗಿದೆ.