ಮಂಗಳೂರು, ಜು 30 (DaijiworldNews/SM): ಮಂಗಳೂರಿನ ತೊಕ್ಕೊಟ್ಟು ಸಮೀಪದ ನೇತ್ರಾವತಿ ನದಿಯ ಸೇತುವೆ ಬಳಿಯಿಂದ ಸೋಮವಾರ ಸಂಜೆ ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಪತ್ತೆಗಾಗಿ ಶೋಧಕಾರ್ಯ ತೀವ್ರಗೊಂಡಿದ್ದು, ಮಂಗಳವಾರ ರಾತ್ರಿಯ ವೇಳೆಯೂ ಶೋಧ ಕಾರ್ಯ ಮುಂದುವರೆಸಿ, ಬಳಿಕ ಬುಧವಾರಕ್ಕೆ ಮುಂದುಡಲಾಗಿದೆ.
ನೇತ್ರಾವತಿ ನದಿಯಲ್ಲಿ ಹಾಗೂ ಸೋಮೇಶ್ವರ, ಬೆಂಗ್ರೆ ಕಡಲ ಕಿನಾರೆಯಲ್ಲಿ ಬೃಹತ್ ದೀಪಗಳನ್ನು ಅಳವಡಿಸಿ ಶೋಧ ಕಾರ್ಯವನ್ನು ನಡೆಸಲಾಗಿತ್ತು. ಸುಮಾರು 8 ಗಂಟೆಯ ತನಕ ಶೋಧ ನಡೆಸಿ ಬಳಿಕ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಬುಧವಾರಕ್ಕೆ ಮುಂದೂಡಲಾಯಿತು. ಬುಧವಾರ ಬೆಳಗ್ಗೆ 7 ಗಂಟೆಗೆ ಶೋಧ ಕಾರ್ಯ ಆರಂಭಗೊಳ್ಳಲಿದೆ.
ಸೋಮವಾರ ಸಂಜೆಯಿಂದಲೇ ನದಿಯಲ್ಲಿ ಈಜು ಪಟುಗಳು ಪೊಲೀಸರು ಕೋಸ್ಟ್ ಗಾರ್ಡ್ ತಂಡದ ಸಿಬ್ಬಂದಿಗಳು ಸಿದ್ಧಾರ್ಥ್ ಪತ್ತೆಗಾಗಿ ಶ್ರಮಿಸುತ್ತಿದ್ದರು. ಬಳಿಕ ಮಂಗಳವಾರವು ಮುಂದುವರೆದಿತ್ತು. ಇದೀಗ ರಾತ್ರಿಯವರೆಗೆ ಶೋಧ ನಡೆಸಿದ ಬಳಿಕ ಯಾವುದೇ ಕುರುಹುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಬುಧವಾರಕ್ಕೆ ಮುಂದೂಡಲಾಗಿದೆ. ಇನ್ನು ನೇತ್ರಾವತಿ ನದಿ ಕಿನಾರೆ ಹಾಗೂ ಕಡಲ ಕಿನಾರೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪೊಲೀಸರ ಕಾರ್ಯಕ್ಕೆ ಸ್ಥಳೀಯರು ಕೂಡ ನೆರವಾಗಿದ್ದಾರೆ.