ವಿಟ್ಲ, ಡಿ 17 : ಮಸೀದಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕನಿಗೆ ಪಿಕಪ್ ವಾಹನ ಡಿಕ್ಕಿ ಹೊಡೆದು ಬಾಲಕ ಮೃತಪಟ್ಟ ಘಟನೆ ಬೋಳಂತೂರು ಕೆ.ಪಿ ಬೈಲು ಎಂಬಲ್ಲಿ ಶನಿವಾರ ತಡರಾತ್ರಿ 1 ಗಂಟೆಗೆ ಸಂಭವಿಸಿದೆ. ಬೋಳಂತೂರು ಗ್ರಾಮದ ಕೆ.ಪಿ ಬೈಲು ನಿವಾಸಿ ಬಶೀರ್ ಅವರ ಪುತ್ರ ಮಹಮ್ಮದ್ ಖೈಸ್ (11) ಮೃತಪಟ್ಟ ಬಾಲಕ. ಬೋಳಂತೂರು ಸಮೀಪದ ಕೆ.ಪಿ ಬೈಲು ಎಂಬಲ್ಲಿ ಈದ್ ಮೀಲಾದ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬೋಳಂತೂರು ಕಡೆಯಿಂದ ಬಂದ ಪಿಕಪ್ ವಾಹನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಆತನನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುಲಾಗಿದ್ದರೂ ಅಷ್ಟೊತ್ತಿಗೆ ಮೃತಪಟ್ಟಿದ್ದಾರೆ. ಈತ ಸುರಿಬೈಲ್ ಅಶ್-ಅರಿಯ್ಯದಲ್ಲಿ 5 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಕೆ.ಪಿ ಬೈಲ್ ಮದರಸದಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದರು. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.