ಮೂಲ್ಕಿ,ಸೆ.13: ಸುರತ್ಕಲ್ನ ಟೋಲ್ನ ವಸೂಲಾತಿಗೆ ಈಗಿರುವ ಟೆಂಡರ್ ಅವಧಿ ಮುಗಿದ ಕೂಡಲೇ ಸುರತ್ಕಲ್ ಟೋಲ್ ಬಂದ್ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಮೂಲ್ಕಿಯ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಅವರು ಹೆಜಮಾಡಿ ಹಾಗೂ ಸುರತ್ಕಲ್ ನಡುವೆ ಕೇವಲ 12 ಕಿ.ಮೀ ಅಂತರದಲ್ಲಿ ಎರಡು ಟೋಲ್ಗಳಿದ್ದು ಹೆಜಮಾಡಿ ಟೋಲ್ ಆರಂಭದ ಬಳಿಕ ಸುರತ್ಕಲ್ ಟೋಲ್ ಮುಚ್ಚಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಬಾಕಿ ಇದ್ದು ಅದು ಪೂರ್ಣಗೊಂಡ ಕೂಡಲೇ ಎಲ್ಲಾ ಸರ್ವಿಸ್ ರಸ್ತೆಗಳು ನಿರ್ಮಾಣಗೊಳ್ಳಲಿದೆ. ಹಳೆಯಂಗಡಿಯಿಂದ ಮೂಲ್ಕಿಯ ವರೆಗೆ ಅಗತ್ಯವಿರುವ ಎಲ್ಲಾ ಕಾಮಗಾರಿಗಳನ್ನು ಶೀಘ್ರವೇ ನಿರ್ವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೂಲ್ಕಿ -ಪೊಳಲಿ ಚತುಷ್ಪತ ಹೆದ್ದಾರಿ ನಿರ್ಮಾಣ ಯೋಜನೆ ಚಾಲನೆಯಲ್ಲಿದ್ದು ಮೂಲ್ಕಿ -ಬಿ.ಸಿರೋಡ್-ಪೊಳಲಿ-ಬಜ್ಪೆ ರಸ್ತೆ ಹಾಗೂ ಮೇಲ್ಕಾರ್ ನಿಂದ ಕೊಣಾಜೆ ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸುತ್ತಿದೆ. ಈಗಾಗಲೇ ಯೋಜನೆ ಡಿಪಿಆರ್ ಹಂತದಲ್ಲಿದೆ ಮುಂದಿನ ವರ್ಷ ಕಾಮಗಾರಿ ನಡೆಯುವ ನಿರೀಕ್ಷೆ ಇದೆ ಎಂದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ಬಿಜೆಪಿಯ ಉಮಾನಾಥ ಕೋಟ್ಯಾನ್, ರಂಗನಾಥ ಶೆಟ್ಟಿ ಮತ್ತಿತರರು ಇದ್ದರು.