ಮಂಗಳೂರು, ಜು30(Daijiworld News/SS): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ನಗರದಿಂದ ಉಳ್ಳಾಲ ಕಡೆಗೆ ಹೋಗುವ ಮಾರ್ಗದಲ್ಲಿರುವ ನೇತ್ರಾವತಿ ಸೇತುವೆ ಬಳಿಯಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ್ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರಿಂದ ತೀವ್ರ ಶೋಧ ನಡೆಸಲಾಗುತ್ತಿದೆ.
ಬೆಂಗಳೂರು ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿದ್ದ ಸಿದ್ದಾರ್ಥ್ ನೇತ್ರಾವತಿ ಸೇತುವೆ ಮೇಲೆ ತೆರಳುತ್ತಿದ್ದಾಗ ಕಡೆಕಾರು ರಸ್ತೆಯಲ್ಲಿ ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರು ನಿಲ್ಲಿಸಲು ಹೇಳಿ, ಮೊಬೈಲ್'ನಲ್ಲಿ ಮಾತನಾಡುತ್ತಾ ಕಾರಿನಿಂದ ಇಳಿದು ಮುಂದಕ್ಕೆ ಹೋಗಿದ್ದಾರೆ. ಆ ಬಳಿಕ ನಾಪತ್ತೆ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾರಿನಿಂದ ಇಳಿದ ಸಿದ್ದಾರ್ಥ್ ನಾಪತ್ತೆಯಾಗಿದ್ದು, ನೇತ್ರಾವತಿ ನದಿಗೆ ಹಾರಿರಬಹುದು ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ದೋಣಿಗಳ ಮೂಲಕ ಹುಡುಕಾಟ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಮಾಹಿತಿ ಬಹಿರಂಗಪಡಿಸುತ್ತಿಲ್ಲ.
ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದಾರೆ. ಸಿದ್ಧಾರ್ಥ ಅವರು ಸೇತುವೆಯ ಮಧ್ಯಭಾಗದಿಂದ ನದಿಗೆ ಹಾರಿರಬಹುದೆಂದು ಶಂಕೆ ಹಿನ್ನೆಲೆಯಲ್ಲಿ ದೇಹಕ್ಕಾಗಿ ಬೋಟ್'ಗಳಲ್ಲಿ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ. ಉದ್ಯಮಿ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕಾರಿನ ಡ್ರೈವರ್ ಬಸವರಾಜ್ ಅವರನ್ನು ಕಂಕನಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಬಸವರಾಜ್, ಸಾಹೇಬ್ರು ಇಂಗ್ಲಿಷ್'ನಲ್ಲಿ ಮಾತನಾಡುತ್ತಿದ್ದರು. ಹೀಗಾಗಿ ನನಗೆ ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ.
ಸಿದ್ಧಾರ್ಥ್ ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದು, ಮೊಬೈಲ್'ನಲ್ಲಿ ಮಾತನಾಡಿಕೊಂಡು ಏಕಾಂಗಿಯಾಗಿ ಹೋಗಿದ್ದಾರೆ. ಹೀಗೆ ಹೋದವರು ಕೆಲ ಹೊತ್ತು ಬರದಿದ್ದರಿಂದ ಅವರನ್ನು ಬಸವರಾಜ್ ಅವರು ಕಾರಿನಲ್ಲೇ ಹಿಂಬಾಲಿಸಿಕೊಂಡು ಹೋಗಿದ್ದರು, ಆದರೆ ಸಿದ್ಧಾರ್ಥ್ ಡೈವರ್'ಗೆ ಹಿಂದೆ ಬರದಂತೆ ಹೇಳಿದ್ದಾರೆ ಎನ್ನಲಾಗಿದೆ.
ಶೋಧ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ಸೇರಿದಂತೆ ಜಿಲ್ಲಾಧಿಕಾರಿ, ಡಿಸಿಪಿಗಳು ಭೇಟಿ ನೀಡಿದ್ದಾರೆ.