ಬ್ರಹ್ಮಾವರ, ಜು 29 (Daijiworld News/RD): ಸರಕಾರಿ ನೌಕರರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಬ್ರಹ್ಮಾವರದ ಅಶೋಕ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯಾಗಿದ್ದು, ಇದೀಗ ಅಜ್ಜರಕಾಡು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜ್ಜರಕಾಡು ಭುಜಂಗ ಪಾರ್ಕಿನ ಕಂಪೌಂಡಿನ ಒಳಾಂಗಣದಲ್ಲಿ ಇರುವ, ಮಹಾತ್ಮ ಗಾಂಧಿ ಮಂಟಪದ ಜಗುಲಿಯ ಮೇಲೆ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ ಇವರನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದಾರೆ.
ಆರೋಗ್ಯ ಸ್ಥಿತಿ ಗಂಭೀರವಾದುದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಇವರ ಬಳಿಯಿದ್ದ ಬ್ಯಾಗ್ನಲ್ಲಿ ಲಿಖಿತ ಮರಣ ಪತ್ರವೊಂದು ಲಭ್ಯವಾಗಿದ್ದು, ಪತ್ರದಲ್ಲಿ ತಾನು ಭೂ ಮಾಪನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರನಾಗಿದ್ದೆನೆ. ಕಛೇರಿಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ಉಲ್ಲೇಖಿಸಿರುವುದು ಕಂಡು ಬಂದಿದೆ ಎನ್ನಲಾಗಿದೆ.