ಮೂಡುಬಿದಿರೆ, ಜು 29 (Daijiworld News/MSP): ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಲ್ಲಿ ಪರಿಸರ ಸಂರಕ್ಷಣೆ, ಸ್ವಉದ್ಯೋಗಕ್ಕೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಮೂಡುಬಿದಿರೆ ಅರಮನೆಬಾಗಿಲು ಬಳಿಯಿರುವ ಸ್ಫೂರ್ತಿ ವಿಶೇಷ ಶಾಲೆಯು ವಿನೂತನ ಪ್ರಯತ್ನವನ್ನು ಮಾಡುತ್ತಿದೆ. ಪರಿಸರ ಸ್ನೇಹಿ ಪೆನ್ ತಯಾರಿಸಿ ಅದರ ಮೂಲಕ ಪರಿಸರ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು ವಿಶೇಷ ಮಕ್ಕಳು ಮುಂದಾಗಿದ್ದಾರೆ.
ಏನಿದು ‘ಪರಿಸರಸ್ನೇಹಿ ಪೆನ್’?
ಮಂಗಳೂರಿನ ವಿಆರ್ ಯುನೈಟೆಡ್ ತಂಡದವರು ಮಂಗಳೂರಿನಲ್ಲಿ ‘ಫಾಮ್ಸಿಲ್’ ಎನ್ನುವ ಪರಿಸರ ಸ್ನೇಹಿ ಪೆನ್ಸಿಲ್ ಅನ್ನು ಪರಿಚಯ ಮಾಡಿದ್ದು, ಅದರಿಂದ ಪ್ರೇರಣೆಗೊಂಡ ಮೂಡುಬಿದಿರೆ ಪುರಸಭೆಯ ಪರಿಸರ ಅಧಿಕಾರಿ ಶಿಲ್ಪಾ ಅವರು, ಇಂತಹದೇ ಯೋಜನೆಯನ್ನು ಸ್ಫೂರ್ತಿ ಶಾಲೆಯಲ್ಲಿ ಮಾಡಬಹುದು ಎನ್ನುವ ಚಿಂತನೆಯನ್ನು ಶಾಲೆಯ ಮುಖ್ಯಸ್ಥರ ಗಮನಕ್ಕೆ ತಂದರು. ಅದು ಈಗ ಕಾರ್ಯರೂಪಕೆ ಬಂದಿದೆ. ಈ ಪೆನ್ನಲ್ಲಿ ರಿಫಿಲ್ ಒಂದು ಬಿಟ್ಟರೆ ಉಳಿದ ಎಲ್ಲ ಭಾಗಗಗಳು ಪರಿಸರ ಸ್ನೇಹಿಯಾಗಿರುತ್ತದೆ, ರಿಫಿಲ್ಗೆ ಮೇಲೆ ಬೀಜವನ್ನು ಇಟ್ಟು ಅದನ್ನು ಬಣ್ಣದ ಕ್ರಾಫ್ಟ್ ಕಾಗದದಿಂದ ಸುತ್ತಲಾಗುತ್ತದೆ. ಈಗಾಗಲೇ ಇರುವ ಪೆನ್ ಮಾದರಿಯಲ್ಲಿ ಅದಕ್ಕೆ ಕಾಗದದಿಂದಲೇ ರೂಪು ನೀಡಲಾಗುತ್ತದೆ. ಇತರ ಪೆನ್ಗಳ ರೀತಿಯಲ್ಲೇ ಅದನ್ನು ಬಳಸಬಹುದಾಗಿದೆ. ಈ ಪೆನ್ ಅನ್ನು ವಿಶೇಷ ಸಾಮರ್ಥ್ಯದ ಮಕ್ಕಳು ಸ್ವಯಂ ಉತ್ಸಾಹದಿಂದ ತಯಾರಿಸುತ್ತಿರುವುದು ಇಡೀ ಯೋಜನೆಯ ವಿಶೇಷ.
ಪರಿಸರ ರಕ್ಷಣೆಗೆ ಪೂರಕ:
ಸಾಮಾನ್ಯವಾಗಿ ಪೆನ್ ಬಳಕೆ ಮಾಡಿದ ಬಳಿಕ ಅದನ್ನು ಬಿಸಾಡುವ ಮೂಲಕ ಅಲ್ಲಲ್ಲಿ ಕಸವಾಗುವುದು ಸಹಜ ಆದರೆ ಪರಿಸರ ಸ್ನೇಹಿ ಈ ಪೆನ್ ಅನ್ನು ರಿಫಿಲ್ ತೆಗೆದು ಬಿಸಾಡಿದಲ್ಲಿ ಕಾಗದ ನೀರಿನಲ್ಲಿ ಕರಗುತ್ತದೆ ಹಾಗೂ ಅದರಲ್ಲಿ ಹಾಕಿದ ಬೀಜ ಮೊಳಕೆಯೊಡೆದು ಗಿಡವಾಗುತ್ತದೆ. ಬಳಕೆಯಾದ ಒಂದು ಪೆನ್ ಮೂಲಕ ಒಂದು ಗಿಡವಾಗುವ ಪರಿಕಲ್ಪನೆ ಇದಾಗಿದ್ದು, ಕಸದ ಬದಲು ಪರಿಸರ ಸಂರಕ್ಷಣೆಗೆ ಇದು ಪೂರಕವಾಗಿದೆ.
ಸ್ವ ಉದ್ಯೋಗಕ್ಕೆ ಪ್ರೇರಕ:
ಕಳೆದ ಒಂದು ತಿಂಗಳಿನಿಂದ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಸಂಸ್ಥೆಯ ಮುಖ್ಯಸ್ಥ ಹಾಗೂ ಸಿಬ್ಬಂದಿಗಳು ತರಬೇತಿ ನೀಡುತ್ತಿದ್ದು ವಿಶೇಷ ಚೇತನ ಮಕ್ಕಳು 250 ಕ್ಕೂ ಅಧಿಕ ಪೆನ್ಗಳನ್ನು ಈಗಾಗಲೇ ತಯಾರಿಸಿದ್ದಾರೆ. ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸ್ವ-ಉದ್ಯೋಗ ಮಾಡಲು ಇದರಿಂದ ಅವಕಾಶವಿದೆ. ಇಲ್ಲಿ ತಯಾರಿ ಆದ ಪೆನ್ಗಳನ್ನು ಮಾರಾಟ ಮಾಡಿ, ಮಕ್ಕಳಿಗೆ ಅದರ ಲಾಭಂಶವನ್ನು ನೀಡುವ ಉದ್ದೇಶ ಶಾಲೆಯ ಮುಖ್ಯಸ್ಥರದ್ದು.
ಸ್ಫೂರ್ತಿ ಸಂಸ್ಥೆಯಲ್ಲಿ ಪೈಪ್ ಕಾಂಪೋಸ್ಟಿಂಕ್ ಮೂಲಕ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವಿಧಾನವನ್ನು ಕಲ್ಪಿಸಲಾಗಿದೆ. ಹಲವು ಸಂಸ್ಥೆಗಳ ಜೊತೆಗೂಡಿ ಗಿಡನೆಡುವ ಕಾರ್ಯಕ್ರಮಗಳನ್ನೂ ಮಾಡಿದ್ದೇವೆ. ನಮ್ಮ ಯೋಜನೆಗಳು ಪರಿಸರ ಸ್ನೇಹಿ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸ್ವಉದ್ಯೋಗ ಕಲ್ಪಿಸಲಾಗುತ್ತಿದೆ. ಈ ಎರಡೂ ಆಶಯಗಳಿಗೆ ಅನುಗುಣವಾಗಿ ‘ಪರಿಸರ ಸ್ನೇಹಿ ಪೆನ್’ ಇದೆ. ಮಂಗಳೂರಿನಲ್ಲಿ ಮಾಡಿದ ಪರಿಸರ ಸ್ನೇಹಿ ಪೆನ್ಸಿಲ್ನಿಂದ ಪ್ರೇರಣೆ, ಯೂಟ್ಯೂಬ್ನಲ್ಲಿ ಈ ಬಗ್ಗೆ ಇರುವ ಮಾಹಿತಿಯನ್ನು ಪಡೆದುಕೊಂಡು ಶಾಲೆಯಲ್ಲಿ ನಾವು ಪ್ರಯೋಗ ಮಾಡಿದ್ದೇವೆ. -ಪ್ರಕಾಶ್ ಶೆಟ್ಟಿಗಾರ್, ಮುಖ್ಯಸ್ಥರು, ಸ್ಫೂರ್ತಿ ವಿಶೇಷ ಮಕ್ಕಳ ಶಾಲೆ, ಮೂಡುಬಿದಿರೆ
ಹಲವು ಪರಿಸರ ಸ್ನೇಹಿ ಕಾರ್ಯಕ್ರಮಗಳು ಸ್ಫೂರ್ತಿ ಶಾಲೆಯ ವಿಶೇಷ ಮಕ್ಕಳಿಂದ ನಡೆಯುತ್ತಿದೆ. ಇಂತಹ ಚಟುವಟಿಕೆಗಳನ್ನು ಅಳವಡಿಸುವ ಸಲಹೆಯನ್ನು ನಾವು ನೀಡುತ್ತಿದ್ದು, ಅದನ್ನು ಸ್ವೀಕರಿಸಿ, ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಸ್ಫೂರ್ತಿ ಸಫಲವಾಗಿದೆ. ವಿಶೇಷ ಮಕ್ಕಳಿಂದ ಸಾಮಾಜಿಕ ಜಾಗೃತಿಯಾಗುತ್ತಿರುವುದು ಮಾದರಿ ಕೆಲಸ. -ಶಿಲ್ಪಾ, ಪರಿಸರ ಅಧಿಕಾರಿ, ಮೂಡುಬಿದಿರೆ ಪುರಸಭೆ