ಮಂಗಳೂರು, ಜು29(Daijiworld News/SS): ನಗರದಲ್ಲಿ ಡೆಂಗ್ಯೂ ಹಾವಳಿ ಮಿತಿ ಮೀರುತ್ತಿದ್ದಂತೆಯೇ ಮಹಾನಗರ ಪಾಲಿಕೆ ಸಹಿತ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ರೋಗ ನಿಯಂತ್ರಣಕ್ಕೆ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿವೆ.
ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಮಂಗಳೂರಿನಲ್ಲಿ ಆಷಾಢ ಮಳೆಯ ಮಧ್ಯೆ ಡೆಂಗ್ಯೂ ಜ್ವರ ಹಾವಳಿ ಮಿತಿ ಮೀರಿದ್ದು, ಈಗಾಗಲೇ 500ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವುದು ಜನರಲ್ಲಿ ಚಿಂತೆಗೀಡು ಮಾಡಿದೆ. ಮಂಗಳೂರಿನ ನಗರ ವ್ಯಾಪ್ತಿಯ ಗುಜ್ಜರಕೆರೆ, ಮಂಗಳಾದೇವಿ, ಜಪ್ಪಿನಮೊಗರು, ಬೋಳಾರದಲ್ಲಿ ಆರಂಭದಲ್ಲಿ ಕಾಣಿಸಿಕೊಂಡ ಈ ಜ್ವರದ ಹಾವಳಿ, ಈಗ ಇಡೀ ನಗರವನ್ನು ಆವರಿಸಿಬಿಟ್ಟಿದೆ. ಒಂದೆಡೆ ಮಳೆ, ಮತ್ತೊಂದೆಡೆ ಬಿಸಿಲು ಬರುತ್ತಿರುವುದು ಡೆಂಗ್ಯೂ ರೋಗ ಹರಡುವ ಸೊಳ್ಳೆಗಳ ಪ್ರಸಾರಕ್ಕೆ ಕಾರಣವಾಗಿದೆ. ಹೀಗಾಗಿ ಜನಸಾಮಾನ್ಯರು ಡೆಂಗ್ಯೂ ಹೆಸರು ಕೇಳಿದರೆ ಭಯ ಪಡುವಂತಾಗಿದೆ.
ಪಾಲಿಕೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿಯು ಕಟ್ಟಡ ಕಾಮಗಾರಿ ಸೈಟ್ಗಳು, ಕಟ್ಟಡಗಳು, ಮನೆಗಳಿಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅಂತಹ ತಾಣಗಳಿದ್ದರೆ ಕಟ್ಟಡ ಮಾಲಕರಿಗೆ ದಂಡ ವಿಧಿಸಲಾಗುತ್ತಿದೆ. ಇನ್ನೊಂದೆಡೆ ಪಾಲಿಕೆ ವತಿಯಿಂದ ಫಾಗಿಂಗ್, ಸ್ಪ್ರೇ ಮಾಡಲಾಗುತ್ತಿದೆ.
ಸೊಳ್ಳೆಗಳ ಮೊಟ್ಟೆಗಳು, ಲಾರ್ವಾಗಳು ಉತ್ಪತಿಯಾಗದಂತೆ ನೋಡಿಕೊಳ್ಳುವ ಮೂಲಕ ಮಲೇರಿಯಾ, ಡೆಂಗ್ಯೂ ನಿಯಂತ್ರಿಸಬಹುದು. ಮನೆ, ಕಟ್ಟಡ ಪರಿಸರದಲ್ಲಿ ನಿಂತ ನೀರಿನಲ್ಲಿ ಮೊಟ್ಟೆಗಳು, ಲಾರ್ವಾಗಳು ಕಂಡುಬಂದರೆ ಅವುಗಳನ್ನು ನಾಶಪಡಿಸಬೇಕು. ಸದ್ಯ ಡೆಂಗ್ಯೂ ಹೆಚ್ಚು ಕಂಡುಬಂದಿರುವ ಪ್ರದೇಶಗಳನ್ನು ಗ್ರಿಡ್ಗಳಾಗಿ ವಿಂಗಡಿಸಿದ್ದು, ಆರೋಗ್ಯ ಇಲಾಖೆಯ ವತಿಯಿಂದ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯ ನಡೆಯುತ್ತಿದೆ.
ನಗರದಲ್ಲಿ ತಿಂಗಳ ಅವಧಿಯಲ್ಲಿ ಡೆಂಗ್ಯೂ ಜ್ವರ ವ್ಯಾಪಿಸಿದ್ದು ಹದಿನೈದು ದಿನಗಳಲ್ಲಿ ಓರ್ವ ಬಾಲಕ ಸೇರಿದಂತೆ ನಾಲ್ವರು ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ. ಕಳೆದೊಂದು ವಾರದ ಅವಧಿಯಲ್ಲಿ 225ಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬಹುತೇಕರು ಮಂಗಳೂರಿನವರು. ಇದರಿಂದಾಗಿ ನಗರದ ಜನತೆಯಲ್ಲಿ ಸಹಜವಾಗಿಯೇ ಡೆಂಗ್ಯೂ ಜ್ವರದ ಬಗ್ಗೆ ಆತಂಕ ಆವರಿಸಿದೆ.