ಕಾಸರಗೋಡು, 28 ಜು (Daijiworld News/RD): ಕಳೆದ ಕೆಲವು ದಿನಗಳಿಂದ ಹಿಂದೆ ನಿಗೂಢ ಜ್ವರದಿಂದ ಬಳಲುತ್ತಿದ್ದ ಇಬ್ಬರು ಪುಟಾಣಿಗಳು ಮೃತಪಟ್ಟಿದ್ದ ಘಟನೆ ಬದಿಯಡ್ಕ ಸಮೀಪದ ಕನ್ಯಪ್ಪಾಡಿಯಲ್ಲಿ ನಡೆದಿದೆ. ಮೃತಪಟ್ಟ ಮಕ್ಕಳಲ್ಲಿ ಕಾಣಿಸಿಕೊಂಡ ಈ ನಿಗೂಢ ಜ್ವರಕ್ಕೆ ಮಿಲಿಯೋಡಿಯೋಸಿಸ್ ಸೋಂಕು ಕಾರಣ ಎಂದು ಮಣಿಪಾಲ ವೈರಾಲಜಿ ಇನ್ಸ್ಸ್ಟಿಟ್ಯೂಟ್ ಸ್ಪಷ್ಟ ಪಡಿಸಿದೆ.
ಕನ್ಯಪ್ಪಾಡಿಯ ಸಿದ್ದಿಕ್ ರವರ ಮಕ್ಕಳಾದ 8 ವರ್ಷದ ಸಿಧಾರುತ್ತಲ್ ಮುಂತಾಹ್ ಮತ್ತು 6 ತಿಂಗಳ ಮಗು ಸಿನಾಸ್ ಮೃತಪಟ್ಟ ಪುಟಾಣಿಗಳಾಗಿದ್ದು, ತೀವ್ರವಾದ ಜ್ವರದಿಂದ ಬಳಲುತ್ತಿದ್ದ ಕಾರಣ ಸಾವನ್ನಪ್ಪಿದ್ದಾರೆ. ಕೆಲವು ದಿನಗಳಿಂದ ಈ ಇಬ್ಬರು ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡ ಕಾರಣ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಂದಮ್ಮಗಳು ಆಸ್ಪತ್ರೆಯಲ್ಲಿ ಅಸುನೀಗಿದವು. ಇನ್ನು ಮಕ್ಕಳ ಸಾವಿನ ಹಿನ್ನಲೆಯಲ್ಲಿ ವೈದ್ಯಕೀಯ ತಂಡವು ಭೇಟಿ ನೀಡಿ ತಪಾಸಣೆ ನಡೆಸಿದ್ದು, ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದೆ.
ಮಣಿಪಾಲದ ವೈರಾಲಜಿ ಇನ್ಸ್ಸ್ಟಿಟ್ಯೂಟ್ ಸೋದರರಿಬ್ಬರ ರಕ್ತವನ್ನು ಪರೀಕ್ಷಿಸಿದ್ದು, ಕಲುಷಿತ ನೀರು ಮತ್ತು ಕಲುಷಿತ ಆಹಾರ ಸೇವನೆಯೆ ಪರಿಣಾಮವಾಗಿ ಮಿಲಿಯೋಡಿಯೋಸಿಸ್ ಸೋಂಕು ತಗುಲಿ ಈ ಜ್ವರ ಬಾಧಿಸಿದೆ ಎಂದು ಹೇಳಿದೆ. ನಿಗೂಢ ಜ್ವರದ ಪರಿಣಾಮವಾಗಿ ಆರಂಭದಲ್ಲಿ ಮಕ್ಕಳ ಸಾವಿಗೆ ಕಾರಣ ತಿಳಿಸಲು ಸಾಧ್ಯವಾಗಲಿಲ್ಲ. ವೈರಸ್ನಿಂದ ಸಾವು ಉಂಟಾಗಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದು, ಆ ಬಳಿಕ ಮಣಿಪಾಲದ ವೈರಾಲಜಿ ಇನ್ಸ್ಸ್ಟಿಟ್ಯೂಟ್ ನಡೆಸಿದ ರಕ್ತ ಮಾದರಿಯನ್ನು ಪರೀಕ್ಷಿಸಿದಾಗ ಮಿಲಿಯೋಡಿಯೋಸಿಸ್ ಸೋಂಕು ತಗುಲಿರುವುದರಿಂದ ಮಕ್ಕಳು ಮತೃಪಟ್ಟಿದ್ದಾರೆ. ಕಲುಷಿತ ನೀರು ಅಥವಾ ಬ್ಯಾಕ್ಟೀರಿಯಾದಿಂದ ಮಿಲಿಯೋಡಿಯೋಸಿಸ್ ಸೋಂಕು ಬರುತ್ತದೆ ಎಂದು ಹೇಳಿದೆ.
ಮಿಲಿಯೋಡಿಯೋಸಿಸ್ ಸೋಂಕು, ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳು, ವೃದ್ಧರು, ಗರ್ಭಿಣಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಇವರು ಹೆಚ್ಚಾಗಿ ಈ ಕಾಯಿಲೆಗೆ ತುತ್ತಾಗುತ್ತಾರೆ. ಈ ಕಾಯಿಲೆಗೆ ಚಿಕಿತ್ಸೆ ತಡವಾದರೆ ಸಾವು ಸಂಭವಿಸುತ್ತದೆ. ಇನ್ನು ರೋಗದ ಮೂಲವನ್ನು ಪತ್ತೆಹಚ್ಚಲು ಪರಿಶೋಧನೆ ಮುಂದುವರಿಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಮಕ್ಕಳ ತಾಯಿಗೂ ಜ್ವರ ತಗುಲಿದ್ದು ಪೆರೆಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.