ಉಡುಪಿ, ಜು 28 (Daijiworld News/MSP): ಉಡುಪಿಯ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಅಸ್ಪತ್ರೆಗೆ ಸರಬರಾಜಾದ ಕುಡಿಯುವ ನೀರಿನಲ್ಲಿ ಆಲ್ಕೋಹಾಲ್ ಅಂಶ ಪತ್ತೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ಪತ್ರೆಯ ಗೌರವ ಹಾಗೂ ರೋಗಿಗಳ ಪ್ರಾಣಕ್ಕೆ ಸಂಚಕಾರ ತರುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆಸ್ಪತ್ರೆಯ ಮ್ಯಾನೇಜರ್ ಪ್ರಶಾಂತ್ ಮಲ್ಯ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಆಸ್ಪತ್ರೆಗೆ ಪೂರೈಕೆಯಾದ ನೀರಿನಲ್ಲಿ ಆಲ್ಕೋಹಾಲ್ ಅಂಶ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಏನಾಗಿತ್ತು? : ಕಳೆದ ಮೇ 13ರಂದು ಅಜಿತ್ ಎಂಬಾತ ಆಸ್ಪತ್ರೆಗೆ ನೀರಿನ ಕ್ಯಾನ್ ಡೆಲಿವರಿ ಮಾಡಿದ್ದರು. ಇದರಲ್ಲಿ 3 ಕ್ಯಾನ್ಗಳ ಮೇಲೆ ಲೇಬಲ್ ಇಲ್ಲದಿರುವುದನ್ನು ಗಮನಿಸಿ ಅದನ್ನು ವಾಪಸ್ ನೀಡಿ 3 ಕ್ಯಾನ್ಗಳನ್ನು ಮಾತ್ರ ಸ್ವೀಕರಿಸಲಾಗಿತ್ತು. ಅವುಗಳ ಪೈಕಿ ಬ್ಯಾಚ್ ನಂಬರ್ 21/2017 ಕ್ಯಾನ್ನಲ್ಲಿದ್ದ ನೀರನ್ನು ಜುಲೈ 4 ರಂದು ಆಸ್ಪತ್ರೆಯ ಹ್ಯೂಮಿಡಿಫೈಯರ್ಗೆ (ರೋಗಿಗಳಿಗೆ ಅಮ್ಲಕನ ಒದಗಿಸಲು ಬಳಸುವ ಸಾಧನ) ಈ ನೀರು ಭರ್ತಿ ಮಾಡಲಾಗಿತ್ತು. ಅಂದು ಮಧ್ಯಾಹ್ನ ಆಸ್ಪತ್ರೆಯ ಸಿಬ್ಬಂದಿಯ ಕೈಮೇಲೆ ನೀರು ಬಿದ್ದಾಗ ಹಿಮದ ಅನುಭವವಾಗಿತ್ತು. ತಕ್ಷಣ ವಾಸನೆ ಪರಿಶೀಲಿಸಿದಾಗ ಸ್ಪಿರಿಟ್ ವಾಸನೆ ಬಂತು. ಈ ಹಿನ್ನಲೆಯಲ್ಲಿ ಆ ನೀರನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದರಲ್ಲಿ ಶೇ 53.43ರಷ್ಟು ಆಲ್ಕೋಹಾಲ್ ಅಂಶ ಇರುವುದು ದೃಢಪಟ್ಟಿದೆ ಎಂದು ಪ್ರಶಾಂತ್ ಮಲ್ಯ ದೂರಿನಲ್ಲಿ ವಿವರಿಸಿದ್ದಾರೆ. ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.