ಬಂಟ್ವಾಳ, ಜು 28 (Daijiworld News/MSP): ಇಲ್ಲಿನ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಂಬಿಲಪದವು ಎಂಬಲ್ಲಿ ಕೋಳಿ ಸಾಕಾಣಿಕೆ ಕೇಂದ್ರದ ನಿರ್ವಹಣೆ ಸರಿಯಾಗಿಲ್ಲದ ಕಾರಣ, ಈ ಪರಿಸರದ ಸುತ್ತ ಸೊಳ್ಳೆ ಹಾಗೂ ನೊಣಗಳು ಉತ್ಪತ್ತಿಯಾಗಿ ಹತ್ತಿರದ ಅಂಗನವಾಡಿ ಸಹಿತ ಸುಮಾರು 35 ಅಧಿಕ ಮನೆಗಳು ಮನೆಯ ಬಾಗಿಲು ಹಾಕಿ ಗೃಹಬಂಧನದಲ್ಲಿರುವಂತೆ ವರ್ಷವಿಡೀ ಜೀವನ ಸಾಗಿಸಬೇಕಾದ ಶೋಚನೀಯ ಸ್ಥಿತಿ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಂಪುಗುಡ್ಡೆಯ ಕಲ್ಲು ಕೋರೆಗಳನ್ನು ದಾಟಿ ಮುಂದೆ ಸಾಗಿದಾಗ ಬಾಂಬಿಲ ಪದವು ಎಂಬ ಊರು ಸಿಗುತ್ತೆ. ಇಲ್ಲಿ ಸುಮಾರು 20 ಸಾವಿರ ಕೋಳಿ ಸಾಕಾಣಿಕೆ ಮಾಡುವ ಕೇಂದ್ರ ಇದೆ.ಆದರೆ ಈ ಕೇಂದ್ರದ ನಿರ್ವಹಣೆ ಯನ್ನು ಸರಿಯಾದ ರೀತಿಯಲ್ಲಿ ಮಾಡದೆ ಸೊಳ್ಳೆ ಹಾಗೂ ನೊಣಗಳು ಉತ್ಪಾದನೆಯಾಗಿ ಈ ಪರಿಸರದ ಜನರಿಗೆ ವಿಪರೀತ ಕಾಟ ಹಾಗೂ ದುರ್ನಾತ ಬೀರುತ್ತಿದೆಎಂದು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಸ್ಥಳೀಯ ಅಮ್ಟಾಡಿ ಗ್ರಾಮ ಪಂಚಾಯತ್ ನ ಪಿಡಿಒ, ತಾಲೂಕು ಪಂಚಾಯತ್ ಇ.ಒ., ತಾಲೂಕು ಆರೋಗ್ಯಧಿಕಾರಿ, ಪೋಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿ ದಿನೇಶ್ ರೋಡ್ರಿಗಸ್ ಅವರು ಆರೋಪ ವ್ಯಕ್ತಪಡಿಸಿದರು.
ಅಮ್ಟಾಡಿ ಗ್ರಾ.ಪಂ.ನಲ್ಲಿ ಇತ್ತೀಚಿಗೆ ನಡೆದ ಗ್ರಾಮಸಭೆಯಲ್ಲೂ ಈ ವಿಷಯ ಪ್ರಸ್ತಾಪ ಮಾಡಲಾಗಿತ್ತು. ಆದರೂ ಯಾವುದೇ ಸ್ಪಂದನೆ ಇಲ್ಲ. ಕಳೆದ ಎಂಟು ತಿಂಗಳಿನಿಂದ ದೂರು ನೀಡುತ್ತಲೇ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೇಂದ್ರ ಸಂಪೂರ್ಣ ಅಕ್ರಮವಾಗಿದೆ ಎಂದು ಅವರು ಆರೋಪ ವ್ಯಕ್ತಪಡಿಸಿದರು.
ಈ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಎನ್ಒ.ಸಿ.ಇಲ್ಲ, ಲೈಸೆನ್ಸ್ ಇಲ್ಲ, ಎಂದು ನಗರ ಠಾಣೆಯ ಹಿಂಬರಹ ಇದೆ ಎಂದು ದೂರು ನೀಡಿದ ಸ್ಥಳೀಯರು ತಿಳಿಸಿದ್ದಾರೆ. ಆದರೆ ಈವರೆಗೆ ಈ ಕೇಂದ್ರದ ಮೇಲೆ ಯಾವುದೇ ಕಠಿಣ ಕ್ರಮ ಮಾಡಿಲ್ಲ ಎಂದು ಅಸಾಹಯಕತೆ ವ್ಯಕ್ತಪಡಿಸುತ್ತಾರೆ ಸ್ಥಳೀಯರು.
ಬಾಗಿಲು ತೆರೆಯುವಂತಿಲ್ಲ: ಇಲ್ಲಿನ ನಿವಾಸಿಗಳು ವರ್ಷ ಪೂರ್ತಿ ಮನೆಯ ಬಾಗಿಲು ತೆರದು ಇಡುವಂತಿಲ್ಲ. ಹೊರಗೆ ಹೋಗಲು, ಬರಲು ಮಾತ್ರ ಬಾಗಿಲು ತೆರೆಯಬೇಕಾದ ಅನಿವಾರ್ಯ ಪರಿಸ್ಥಿತಿ. ಒಂದು ವೇಳೆ ಬಾಗಿಲು ತೆರೆದರೆ ಮನೆಯ ತುಂಬಾ ಸೊಳ್ಳೆ ನೊಣಗಳ ರಾಶಿ ರಾಶಿ. ಮನೆಯ ಆಹಾರದಿಂದ ಹಿಡಿದು ಮೈ ತುಂಬಾ ನೊಣಗಳು ತುಂಬಿಕೊಳ್ಳುತ್ತೆ. ಜಿಲ್ಲೆಯಲ್ಲಿ ಮಾರಕ ರೋಗಗಳು ದಿನದಿಂದ ದಿನಕ್ಕೆ ಹೆಚ್ಚಾಗುವ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಸಮಸ್ಯೆ ಗಳ ಬಗ್ಗೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಸ್ಥಳೀಯರು ಮನವಿ ಮಾಡಿದ್ದಾರೆ.
ಎಸ್.ಐ.ಭೇಟಿ: ಜಿಲ್ಲಾಧಿಕಾರಿ ಅವರ ಬಾಗಿಲು ತಟ್ಟಿದ ಸ್ಥಳೀಯರು ಮತ್ತೆ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅವರಿಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಎಸ್.ಐ.ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಈ ಹಿಂದೆ ದೂರಿನ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲು ಸ್ಥಳೀಯ ಗ್ರಾ.ಪಂ.ನವರಿಗೂ ಕೋರಿದ್ದರು. ಅವರ ಸ್ಪಂದನೆ ಇಲ್ಲದ ಕಾರಣ ಮತ್ತೆ ಸ್ಥಳಕ್ಕೆ ಭೇಟಿ ನೀಡಿ ಕೋಳಿ ಸಾಕಾಣಿಕಾ ಕೇಂದ್ರದ ಕೆಲಸಗಾರರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಿಲ್ಲವಾದರೆ ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಸ್.ಐ.ಚಂದ್ರಶೇಖರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.