ಕಾಸರಗೋಡು, ಜು 27 (Daijiworld News/RD): ಶ್ರೀಲಂಕಾ ಪ್ರಧಾನ ಮಂತ್ರಿ ರೆನಿಲ್ ವಿಕ್ರಮ ಸಿಂಘೆ ಇಂದು ಕುಂಬಳೆ ಸಮೀಪದ ಬೇಳ ಕುಮಾರ ಮಂಗಲದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಶನಿವಾರ ಶ್ರೀ ಕ್ಷೇತ್ರದಲ್ಲಿ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಗಣಪತಿಹೋಮ, ನವಕಾಭಿಷೇಕ, ಆಶ್ಲೇಷ ಬಲಿ, ಅಲಂಕಾರ ಪೂಜೆಯ ಬಳಿಕ ಮಹಾಪೂಜೆ ನಡೆಯಿತು. ಶುಕ್ರವಾರ ರಾತ್ರಿ ರಂಗಪೂಜೆ ನಡೆಸಲಾಯಿತು. ಜ್ಯೋತಿಷ್ಯ ರತ್ನ ಬೇಳ ಪದ್ಮನಾಭ ಶರ್ಮ ಅವರು ಹಿಂದೆ ಶ್ರೀಲಂಕಾ ಪ್ರಧಾನಿ ಮನೆಯಲ್ಲಿ ಪ್ರಶ್ನೆ ಚಿಂತನೆ ಇರಿಸಿದಾಗ ಕಂಡ ದೋಷ ಪರಿಹಾರಕ್ಕಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ ಹಾಗೂ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರ, ಬೇಳ ರಾಮಚಂದ್ರ ಅಡಿಗ, ಕಿಳಿಂಗಾರು ಗೋಪಾಲಕೃಷ್ಣ ಭಟ್, ಮುರಳೀಕೃಷ್ಣ, ಅಸ್ರ ವೈದಿಕ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ, ಆಡಳಿತ ಸಮಿತಿ ಪದಾಧಿಕಾರಿಗಳಾದ ಬಿ. ವಸಂತ ಪೈ ಬದಿಯಡ್ಕ, ಶ್ರೀಧರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಕಾಸರಗೋಡು ಎಸ್ಪಿ ಜೇಮ್ಸ್ ಥೋಮಸ್, ಡಿವೈಎಸ್ಪಿ ಶಿಲ್ಪಾ ಡಿ, ಸಹಾಯಕ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.
ಶ್ರೀಲಂಕಾ ಪ್ರಧಾನಿಗೆ ಬೀಳ್ಕೊಡುಗೆ:
ಕೇರಳದ ಕಾಸರಗೋಡಿಗೆ ಪ್ರಥಮ ಬಾರಿಗೆ ಖಾಸಗಿ ಭೇಟಿಗಾಗಿ ಆಗಮಿಸಿ ಕ್ಷೇತ್ರ ದರ್ಶನದ ಬಳಿಕ ಹಿಂತಿರುಗಿದ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ಸಿಂಘೆ ಅವರನ್ನು ಕಾಸರಗೋಡು ಜಿಲ್ಲಾಕಾರಿ ಡಾ.ಡಿ. ಸಜಿತ್ ಬಾಬು ನೇತೃತ್ವದಲ್ಲಿ ಬೇಕಲ್ ಲಲಿತ್ ರೆಸಾರ್ಟ್ ಹೆಲಿಪ್ಯಾಡ್ನಲ್ಲಿ ಬೀಳ್ಕೊಡುಗೆ ನೀಡಲಾಯಿತು. ಅವರೊಂದಿಗೆ ಚೆನ್ನೈಯ ಶ್ರೀಲಂಕಾ ಡೆಪ್ಯೂಟಿ ಹೈಕಮೀಷನರ್ ವಿಶ್ವನಾಥ್ ಅಪೋನ್ಸು, ಕಾಸರಗೋಡು ಎಸ್ಪಿ ಜೇಮ್ಸ್ ಥೋಮಸ್ ಜೊತೆಗಿದ್ದರು.
ದೇವಸ್ಥಾನ ಸುತ್ತಲೂ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಪ್ರಧಾನ ಮಂತ್ರಿಯವರು ವಾಹನ ತೆರಳುತ್ತಿರುವ ಸಂದರ್ಭದಲ್ಲಿ ಸಂಚಾರ ನಿಯಂತ್ರಣ ತರಲಾಗಿತ್ತು. ಬಳಿಕ ದೇವಸ್ಥಾನಕ್ಕೆ ತಲಪಿದ ವಿಕ್ರಮ ಸಿಂಘೆಯವರನ್ನು ಆಡಳಿತ ಸಮಿತಿ, ಮೊದಲಾದವರು ಸ್ವಾಗತಿಸಿದರು.
ದರ್ಶನ ಸಮಯದಲ್ಲಿ ಅರ್ಚಕ ಸೇರಿದಂತೆ ಹದಿನೈದು ಮಂದಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಕುಮಾರಮಂಗಲದಿಂದ ಬೇಕಲಕ್ಕೆ ಕಾರಿನ ಮೂಲಕ ತೆರಳಿದ ವಿಕ್ರಮ ಸಿಂಘೆ, ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಿದರು.