ಸುಬ್ರಹ್ಮಣ್ಯ, ಜು27(Daijiworld News/SS): ಬೆಂಗಳೂರು - ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ ಎಡಕುಮೇರಿ ಭಾಗದಲ್ಲಿ ಪ್ರಾಕೃತಿಕ ವಿಕೋಪಗಳಿಂದ ರೈಲ್ವೇ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿರುವ ಬೆನ್ನಲ್ಲೇ, ಶಂಕಿತ ನಕ್ಸಲರ ಚಲನ-ವಲನ ಕಂಡು ಬಂದಿದ್ದು, ನಾಗರಿಕರು ಆತಂಕಗೊಂಡಿದ್ದಾರೆ.
ಬೆಂಗಳೂರು-ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟ್ ಎಡಕುಮೇರಿ ಭಾಗದಲ್ಲಿ ಕಳೆದ ಕೆಲ ದಿನಗಳ ಹಿಂದೆ ರೈಲು ಹಳಿ ಗಸ್ತು ನಿರತ ಸಿಬ್ಬಂದಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೆದರಿಕೆ ಒಡ್ಡಿದ ಬಳಿಕ ಅವರು ನಕ್ಸಲರು ಎಂಬ ಶಂಕೆ ಮೇರೆಗೆ ಈ ಭಾಗದ ಅರಣ್ಯಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿದೆ.
ರೈಲ್ವೆ ಕಾರ್ಮಿಕ ರಾಜು ಅವರಿಗೆ ಶಸ್ತ್ರಧಾರಿ ಅಪರಿಚಿತರಿಬ್ಬರು ಬೆದರಿಕೆ ಒಡ್ಡಿದ್ದರು. ಬಳಿಕ ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಲೆ ಘಾಟ್, ಸಂಪಾಜೆ, ಸುಬ್ರಹ್ಮಣ್ಯ ಹಾಗೂ ಕೊಡಗು ಅರಣ್ಯ ಭಾಗಗಳಲ್ಲಿ ಕಾರ್ಕಳ ಎಎನ್ಎಫ್ ಪಡೆಯ ಯೋಧರು ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಡಿಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಈ ಹಿಂದೆಯೂ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದಿದ್ದರಿಂದ ಬೆಳ್ತಂಗಡಿ ಬೆಟಾಲಿಯನ್ನ 24 ಮಂದಿ ಯೋಧರ ಎರಡು ತಂಡ ಸಂಪಾಜೆ, ಬಿಸಿಲೆ, ಸುಬ್ರಹ್ಮಣ್ಯ, ನಾಗರಕೊಲ್ಲಿ ಭಾಗದಲ್ಲಿ ಶೋಧ ಆರಂಭಿಸಿದೆ. ಶುಕ್ರವಾರ ಬಿಸಿಲೆ, ಭಾಗ್ಯ, ಎಡಕುಮೇರಿ, ಕಾಗಿನೆರಿಕಟ್ಟೆ, ಮಣಿಬಂಡ ಮೊದಲಾದೆಡೆ ಶೋಧಿಸಲಾಗಿದೆ.
ಗಸ್ತು ನಿರತ ರೈಲ್ವೇ ಸಿಬಂದಿಗೆ ಬೆದಿಕೆ ಒಡ್ಡಿದ ಅಪರಿಚಿತರು ನಕ್ಸಲರೇ ಅಥವಾ ಬೇಟೆಗಾರರೇ, ಚಾರಣಿಗರೇ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ರೈಲ್ವೇ ಕಾರ್ಮಿಕ ರಾಜು ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಯುತ್ತಿದೆ. ಮುನ್ನೆಚ್ಚರಿಕೆ ಸಲುವಾಗಿ ಎರಡೂ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.