ಮಂಗಳೂರು, ಜು27(Daijiworld News/SS): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಜನರಲ್ಲಿ ಆತಂಕ ಉಂಟು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜ್ವರದಿಂದ ಬಳಲುತ್ತಿರುವ 46 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ದಿನದಿಂದ ದಿನಕ್ಕೆ ಡೆಂಗ್ಯೂ ಜ್ವರ ಬಾಧಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜು.26ರಂದು 46 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಮಂಗಳೂರು ತಾಲೂಕಿನಲ್ಲಿ 40, ಬಂಟ್ವಾಳದಲ್ಲಿ ನಾಲ್ವರು ಜ್ವರದಿಂದ ಬಳಲುತ್ತಿದ್ದಾರೆ. ಹೊರ ಜಿಲ್ಲೆಯ ಇಬ್ಬರನ್ನು ಜಿಲ್ಲೆಯಲ್ಲಿ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗಿದೆ. ಕಾರ್ಡ್ ಟೆಸ್ಟ್ನಲ್ಲಿ ಎಲ್ಲರ ರಿಸಲ್ಟ್ ಪಾಸಿಟಿವ್ ಬಂದಿದೆ. ಜುಲೈ 18ರಿಂದ ಇಲ್ಲಿವರೆಗೆ ಒಟ್ಟು 306 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಈ ಪೈಕಿ 30 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ.
ಡೆಂಗ್ಯೂ ಬಾಧಿತ ಪ್ರದೇಶಗಳಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳಿಯವಾಗಿ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಮನೆ ಮನೆಗೆ ತೆರಳಿ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡುತ್ತಿದ್ದಾರೆ. ತಾಲೂಕಿನ ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲಿ ನಿಗಾ ವಹಿಸಲಾಗುತ್ತಿದೆ.
ಮಂಗಳೂರು ನಗರದಲ್ಲಿ ಜು.26ರಂದು ಡೆಂಗ್ಯೂ ವಿರುದ್ಧದ ಕಾರ್ಯಾಚರಣೆ ಬಂದರು ಮತ್ತು ಪಾಂಡೇಶ್ವರ ಪ್ರದೇಶದಲ್ಲಿ ನಡೆದಿದೆ. ಈ ವೇಳೆ ಹಲವು ಸೊಳ್ಳೆ ಸಂತಾನೋತ್ಪತ್ತಿ ತಾಣಗಳು ಪತ್ತೆಯಾಗಿದ್ದವು. ಈ ಹಿನ್ನಲೆ, ಹಲವು ಉದ್ದಿಮೆದಾರರು, ಖಾಲಿ ಜಾಗದ ಮಾಲೀಕರು ಮತ್ತು ನಿರ್ಮಾಣ ಹಂತದ ಕಟ್ಟಡದ ಮಾಲೀಕರಿಗೆ ಒಟ್ಟು 35 ಸಾವಿರ ರೂ. ದಂಡ ವಿಧಿಸಲಾಗಿದೆ.
ಮಳೆ ಆರಂಭವಾದರೂ ಸಂಗ್ರಹಿಸಿರುವ ನೀರನ್ನು ಚೆಲ್ಲಿ ಶುಚಿ ಮಾಡದೇ ಇದ್ದದ್ದರಿಂದಲೂ ಡೆಂಗ್ಯೂ ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಶಂಕಿತ ಡೆಂಗ್ಯೂ ಬಾಧಿತ ಪ್ರದೇಶಗಳಲ್ಲಿ ಫಾಗಿಂಗ್ ನಡೆಸಿರುವುದಲ್ಲದೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ.