ಮಂಗಳೂರು, ಜು27(Daijiworld News/SS): ಅಕ್ರಮ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ನಗರದ ವಾಮಂಜೂರು ಆಶ್ರಯ ಕಾಲೊನಿ ನಿವಾಸಿ ಮಹಮ್ಮದ್ ಮುಸ್ತಫಾ (21), ಉಳಾಯಿಬೆಟ್ಟು ಆಚಾರಿಬೆಟ್ಟು ನಿವಾಸಿ ಹಸನ್ ಅಫ್ರಾನ್ ಯಾನೆ ಅಫ್ರಾನ್ ಯಾನೆ ಅಪ್ಪು (20), ಮೂಡುಶೆಡ್ಡೆ ಶಿವನಗರ ನಿವಾಸಿ ಫೈಜಲ್ ಯಾನೆ ಫೈಜಲ್ ಯಾನೆ ಪಜ್ಜು (36) ಬಂಧಿತ ಆರೋಪಿಗಳು.
ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ತೊಕ್ಕೊಟ್ಟು ಬಳಿ ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 4 ಕೆ.ಜಿ. ತೂಕದ ಗಾಂಜಾ, ಬೂದು ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್ ಸೇರಿದಂತೆ ಒಟ್ಟು 1ಲಕ್ಷ ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಮುಸ್ತಫಾ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣ ಸೇರಿದಂತೆ ಮೂರು ಪ್ರಕರಣ ಮತ್ತು ಆರೋಪಿ ಫೈಜಲ್ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ, ಕಳ್ಳತನ ಮತ್ತು ಗಾಂಜಾ ಮಾರಾಟ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.