ಮಂಗಳೂರು, ಜು27(Daijiworld News/SS): ದಿನೇ ದಿನೇ ಹೆಚ್ಚುತ್ತಿರುವ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ನಾನಾ ಸಂಘ-ಸಂಸ್ಥೆ ಮತ್ತು ಎನ್ಜಿಒಗಳ ಸಹಯೋಗದಲ್ಲಿ ಜು.28ರಂದು ಡೆಂಗ್ಯೂ ಡ್ರೈವ್ಡೇ ಅಭಿಯಾನ ನಡೆಸಲು ನಿರ್ಧರಿಸಿದೆ.
ಜು.28ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿ ಸಮೀಪ ವಸತಿಗೃಹದಲ್ಲಿ ಅಭಿಯಾನ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12ಗಂಟೆಯವರೆಗೆ ನಡೆಯಲಿದೆ. ಡೆಂಗ್ಯೂ ನಿರ್ಮೂಲನೆಗೆ ಈಗಾಗಲೇ ಜಿಲ್ಲಾಡಳಿತ, ಮಹಾನಗರಪಾಲಿಕೆ, ಸಂಘ-ಸಂಸ್ಥೆಗಳು, ಮತ್ತು ಹಲವು ಎನ್ಜಿಒ ಸಾಂಕ್ರಾಮಿಕ ಡೆಂಗ್ಯೂ ಕುರಿತು ಜಾಗೃತಿ ಮೂಡಿಸುತ್ತಿವೆ.
ಡೆಂಗ್ಯೂ ಡ್ರೈವ್ಡೇ ಅಭಿಯಾನದ ವೇಳೆ ಜಿಲ್ಲಾದ್ಯಂತ ಪ್ರತಿ ಮನೆ, ಫ್ಲಾಟ್-ಅಪಾರ್ಟ್'ಮೆಂಟ್, ವಸತಿ ಸಂಕೀರ್ಣ, ಮಳಿಗೆ, ಆಸ್ಪತ್ರೆಗಳು, ಸಂಘ ಸಂಸ್ಥೆಗಳ ಕಟ್ಟಡ, ಸಾರ್ವಜನಿಕ ಸ್ಥಳಗಳು ಸೇರಿದಂತೆ ಪ್ರತಿಯೊಂದು ಸ್ಥಳಗಳಲ್ಲಿಯೂ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಡೆಂಗ್ಯೂ ಡ್ರೈವ್ಡೇ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಮಹಾನಗರಪಾಲಿಕೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಎನ್ಜಿಒ ಸಂಸ್ಥೆಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳು, ಮತ್ತಿತರ ಸಂಘ ಸಂಸ್ಥೆಗಳು ಪಾಲ್ಗೊಳ್ಳಲಿವೆ ಎನ್ನಲಾಗಿದೆ.
ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯಲ್ಲಿ ನೀರು ನಿಲ್ಲದಂತೆ ಹಾಗೂ ಸ್ವಚ್ಛಗೊಳಿಸಿ ಈ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.