ಉಳ್ಳಾಲ, ಜು 26(DaijiworldNews/SM): ರಾಜ್ಯದಲ್ಲಿ ನೂತನ ಸಿಎಂ ಆಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದು, ಎಲ್ಲೆಡೆ ವಿಜಯೋತ್ಸವಗಳು ನಡೆಯುತ್ತಿವೆ. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಮಂಗಳೂರು ನಗರದ ಹಲವುಕಡೆಗಳಲ್ಲಿ ಸಂಭ್ರಮಾಚರಣೆ ಕಂಡು ಬಂತು.
ರೈತ ನಾಯಕ ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ಗಡಗಡ ನಡುಗುತಿತ್ತು. ಅಂತಹ ನಾಯಕ ಯಡಿಯೂರಪ್ಪ ರಾಜಕೀಯ ವಿಚಾರದಲ್ಲಿ ಪಳಗಿದವರು, ರೈತರ ಸಾಲಮನ್ನಾ ಮಾಡುವಲ್ಲಿ ಪಾದಯಾತ್ರೆ ನಡೆಸಿ ಯಶಸ್ವಿಯಾದವರು. ಈ ಮೂಲಕ ಬಿಜೆಪಿ ರೈತರ ಕಾಳಜಿಯುಳ್ಳ ಪಕ್ಷ ಎಂದು ತೋರಿಸಿಕೊಟ್ಟವರು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.
ಅವರು ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ವಹಿಸುತ್ತಿರುವ ಕ್ಷಣದ ಸಂಭ್ರಮಾಚರಣೆಯಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದರು. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಆಧಾರದಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಬೇಕಿತ್ತು. ಆದರೆ ಕಾಂಗ್ರೆಸ್ -ಜೆಡಿಎಸ್ ಸೇರಿಕೊಂಡು ಅನೈತಿಕ ರಾಜ್ಯಭಾರ ನಡೆಸಿ ಇಂದು ದುರಂತಕ್ಕೀಡಾಗಿದೆ. ಇಂತಹ ರಾಜ್ಯಭಾರದಿಂದ ರೋಸಿಹೋದ ಸ್ವಪಕ್ಷೀಯ 15 ಮಂದಿ ಶಾಸಕರು ಪಕ್ಷದ ಹಿರಿಯ ನಾಯಕರ ಮಾತುಗಳನ್ನು ಲೆಕ್ಕಿಸದೆ ಮುಂಬೈನಲ್ಲಿ ಕುಳಿತಿದ್ದಾರೆ. ಸರಕಾರ ಹೋಗಬೇಕೆನ್ನುವ ಅಭಿಲಾಷೆಯಿಂದ ಕುಳಿತಿರುವುದು ವಿಪರ್ಯಾಸ. ಈ ನಡುವೆ ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಸೇರಿಕೊಂಡು ಬಿಜೆಪಿ ಕೈವಾಡವಿದೆ ಅನ್ನುವ ಹೇಳಿಕೆ ಬಾಲಿಷತನವಾಗಿದೆ ಎಂದು ಆರೋಪಿಸಿದರು.
ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಹೊಸ ಅಭಿವೃದ್ಧಿಯ ಇತಿಹಾಸವನ್ನು ಬರೆಯಲಿದೆ. ರೈತರಿಗೆ, ಕೂಲಿ ಕಾರ್ಮಿಕರಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸುವ ಉದ್ದೇಶವನ್ನು ಸರಕಾರ ಇಟ್ಟುಕೊಂಡಿದೆ. ರಾಜ್ಯದ ಜನತೆ ಚುನಾವಣೆಯಲ್ಲಿ ಆರಿಸಿದ ಪಕ್ಷವೇ ಸರಕಾರ ರಚಿಸುವ ಮೂಲಕ ಜನತೆಗೆ ನ್ಯಾಯವನ್ನು ನೀಡಿದೆ ಎಂದರು.