ಬೆಳ್ತಂಗಡಿ, ಜು 26(DaijiworldNews/SM): ಡೆಂಗ್ಯೂ ಜ್ವರ ದ.ಕ. ಜಿಲ್ಲೆಯಲ್ಲಿ ಅತಿ ವೇಗವಾಗಿ ಪಸರಿಸುತ್ತಿರುವುದರಿಂದ ಕಾಯಿಲೆ ತಡೆಗಟ್ಟುವಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದ್ದು, ಶ್ರೀಮಂತರು ಅನಕ್ಷರಸ್ಥರೆನ್ನದೆ ಸ್ವಚ್ಛತೆಯೆಡೆಗೆ ಸಂಕಲ್ಪ ತೊಟ್ಟಲ್ಲಿ ಮಾತ್ರ ಕಾಯಿಲೆ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದ ಅವರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅನೇಕರ ಜೀವ ಹಾನಿಗೆ ಡೆಂಗ್ಯೂ ಕಾರಣವಾಗುತ್ತಿದೆ. ತ್ಯಾಜ್ಯ ಸೇರಿದಂತೆ ಒಡೆದ ಪಾತ್ರೆ, ಪ್ಲಾಸ್ಟಿಕ್ ಪಾತ್ರ ಎಲ್ಲೆಂದರಲ್ಲಿ ಎಸೆಯುವುದರಿಂದ ನೀರು ನಿಂತು ಕ್ರಿಮಿಗಳು ಉತ್ಪತಿಯಾಗಿ ಆ ಮೂಲಕ ಡೆಂಗ್ಯೂ ಹರಡುತ್ತಿರುವುದು ದೃಢಪಟ್ಟಿದೆ.
ರೋಗವನ್ನ ನಾವೇ ಆಹ್ವಾನಿಸಿಕೊಳ್ಳುತ್ತಿರುವುದನ್ನು ದೂರವಾಗಿಸುವುದರಿಂದಲೇ ಭಾರತದಲ್ಲಿ ಸ್ವಚ್ಛ ಭಾರತ ಆಂದೋಲ ಹಮ್ಮಿಕೊಳ್ಳುತ್ತಿರುವ ಉದ್ದೇಶ. ಬಡವರಿಂದ ಹಿಡಿದು ವಿದ್ಯಾವಂತರವರೆಗೆ ಸಣ್ಣ ಮಕ್ಕಳಿಂದ ವಯೋವೃದ್ಧರವೆಗೆ ಸ್ವಚ್ಛತೆ ಸಂಕಲ್ಪ ತೊಡಬೇಕಿದೆ ಎಂದರು.
ಡೆಂಗ್ಯೂ ಕಾಯಿಲೆ ದೂರಮಾಡಲು ಸಾಧ್ಯವಿದೆ. ಮನೆ ಸುತ್ತಮುತ್ತ ಪರಿಸರ ಸ್ವಚ್ಛವಾಗಿಡುತ್ತೇವೆ. ಎಲ್ಲೂ ನೀರು ನಿಲ್ಲದಂತೆ ಕ್ರಿಮಿಗಳು ಉತ್ಪತಿಯಾಗುವ ಸಂದರ್ಭ ತಪ್ಪಿಸುತ್ತೇವೆ ಎಂದಾದಲ್ಲಿ ನಾವು ನೆರೆಕರೆ ಗ್ರಾಮವನ್ನು ಆರೋಗ್ಯವಾಗಿಡಲು ಸಾಧ್ಯವಿದೆ. ಎಚ್ಚರಿಕೆಯ ಗಂಟೆ ಮೊಳಗಿದೆ ನಿರ್ಲಕ್ಷಿಸದಿರಿ ಎಂದು ಎಚ್ಚರಿಸಿದ್ದಾರೆ.