ಬೆಳ್ತಂಗಡಿ, 26(Daijiworld News/RD): ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಶಿರ್ಲಾಲು ಗ್ರಾಮದ ಹೆಂಡೇಲು ಪ್ರದೇಶದ ಮಲೆಕುಡಿಯ ಕುಟುಂಬಗಳು ರಸ್ತೆ, ವಿದ್ಯುತ್, ಮೋರಿ, ಸೇತುವೆಗಳಿಂದ ವಂಚಿತರಾಗಿದ್ದು, ಸ್ಥಳೀಯ ಗ್ರಾಮಪಂಚಾಯತ್ ಆಡಳಿತವೂ ಸೇರಿದಂತೆ ದೊಡ್ಡ ಮಟ್ಟದ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಇಲ್ಲಿನ ಕುಟುಂಬಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದಕ್ಕೆ ಊರೇ ಸಾಕ್ಷಿ ಹೇಳುತ್ತಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಹೆಂಡೇಲು ಪ್ರದೇಶದಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳೇ ವಾಸಿಸುತ್ತಿದ್ದು ಶಿರ್ಲಾಲು ಗ್ರಾಮ ಪಂಚಾಯತ್ ಕಾರ್ಯಾಲಯದಿಂದ ಕೇವಲ ಐದಾರು ಕಿ.ಮೀ ದೂರದಲ್ಲಿದೆ. ಇಂದಿಗೂ ಚಿಮಿಣಿ ದೀಪದಲ್ಲೇ ದಿನ ದೂಡುವ ದೌರ್ಭಾಗ್ಯ ಹೆಂಡೇಲು ನಿವಾಸಿಗಳದ್ದಾಗಿದೆ. ಹೆಂಡೇಲು ಪ್ರದೇಶ ಶತಮಾನಗಳಿಂದ ಜನಪ್ರತಿನಿಧಿಗಳಿಂದಲೂ, ಅಧಿಕಾರಿಗಳಿಂದಲೂ ನಿರ್ಲಕ್ಷ್ಯಕ್ಕೊಳಗಾಗಿ ಅಭಿವೃದ್ಧಿವಂಚಿತವಾಗಿದೆ. ಇಲ್ಲಿನ ಕುಟುಂಬಗಳು ಸುಮಾರು ನೂರೈವತ್ತು ವರ್ಷಗಳಿಗೂ ಮೊದಲೇ ವಾಸಿಸುತ್ತಿದ್ದ ಕುಟುಂಬಗಳ ತಲೆಮಾರುಗಳು ಎಂಬುದನ್ನು ಜಮೀನಿನ ದಾಖಲೆಗಳೇ ಒತ್ತಿ ಹೇಳುತ್ತವೆ. ಮತದಾರರ ಚೀಟಿ, ಪಡಿತರ ಚೀಟಿ , ಆಧಾರ್ ಕಾರ್ಡ್ ಇದ್ದರೂ, ರಸ್ತೆ, ವಿದ್ಯುತ್ ಮಾತ್ರ ಇವರ ಪಾಲಿಗೆ ದೂರದ ಗಗನ ಕುಸುಮವಾಗಿದೆ.
9 ಮಲೆಕುಡಿಯ ಕುಟುಂಬಗಳು ತಲತಲಾಂತರದಿಂದ ವಾಸಿಸುತ್ತಿದ್ದು ಸುತ್ತಲೂ ದಟ್ಟ ಅರಣ್ಯವಾದರೂ ಕಂಗು, ತೆಂಗಿನ ತೋಟ, ಗದ್ದೆಗಳೂ ಇಲ್ಲಿನ ನಿವಾಸಿಗಳ ಶ್ರಮ ಜೀವನಕ್ಕೆ ಸಾಕ್ಷಿಯಾಗಿದೆ. ಇತ್ತ ದುರ್ಗಮ ರಸ್ತೆ, ಇನ್ನೊಂದೆಡೆ ವಿದ್ಯುತ್ ತಲುಪದಿರುವುದೇ ಯಾರೂ ಕೇಳದ ಬವಣೆಯಾಗಿದೆ. ಇಲ್ಲಿನ ರಸ್ತೆ ಕಲ್ಲು, ಕೆಸರು ಮಣ್ಣು, ಮರದ ಬೇರುಗಳು ಸ್ಥಳೀಯ ಜನಪ್ರತಿನಿಧಿಗಳ, ಅಧಿಕಾರಿಗಳ ಆಡಳಿತ ವೈಖರಿಗೆ ಮತ್ತು ಅಭಿವೃಧ್ಧಿಯ ಕಾಳಜಿಗೆ ಕನ್ನಡಿಯಂತಿದೆ. ಇಲ್ಲಿನ ಮಕ್ಕಳು ಸೇರಿದಂತೆ ನಿವಾಸಿಗಳು ಶಾಲಾ ಕಾಲೇಜುಗಳಿಗೆ ಏಳೆಂಟು ಕಿಮೀ ದೂರ ಇದೇ ಗುಡ್ಡಗಾಡು ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ.
ಮಹತ್ವಾಕಾಂಕ್ಷಿಯ ಅರಣ್ಯ ಹಕ್ಕು ಕಾಯಿದೆ ಮಲೆಕುಡಿಯ ಕುಟುಂಬಗಳ ಪಾಲಿಗೆ ಪುಸ್ತಕದ ಬದನೆಕಾಯಿಯಂತಾಗಿದೆ. 2006ರಲ್ಲಿ ಕಾಯ್ದೆ ಜಾರಿಯಾದಾಗ ನಾವು ಸಂಭ್ರಮಿಸಿದ್ದೆವು ಆದರೆ ಇದೀಗ ಅದೂ ನಮ್ಮ ಪಾಲಿಗೆ ಈ ಕಾಯಿದೆಯಿಂದ ಯಾವುದೇ ಪ್ರಯೋಜನವಾಗಲಿಲ್ಲ. ಇಲ್ಲಿ ಕೇವಲ 100 ಮೀಟರ್ಗಳಷ್ಟು ಮಾತ್ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವುದಾದರೂ ಅಭಿವೃದ್ಧಿಗಾಗಿ ಅರಣ್ಯ ಎಂಬ ಮೂರು ಅಕ್ಷರದ ಪದ ಅಡ್ಡಿಯಾಗಿದೆ ಎಂಬುದೇ ಇಲ್ಲಿನ ನಿವಾಸಿಗಳ ಕೊರಗು.
‘ಸೌಭಾಗ್ಯ’ ಬಂದರೂ ಚಿಮಿಣಿಯೇ ಗತಿ!
ಹತ್ತು ವರ್ಷಗಳ ಹಿಂದೆ ಯಾವುದೋ ಸಂಸ್ಥೆಯೊಂದು ಕಳಪೆ ಗುಣಮಟ್ಟದ ಸೋಲಾರ್ ಲೈಟ್ ಸಂಪರ್ಕ ನೀಡಿದಾಗ ಚಿಮಿಣಿ ದೀಪದಲ್ಲಿ ದಿನ ಕಳೆಯುತ್ತಿದ್ದ ಆದಿವಾಸಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ ಅದೇ ಸೋಲಾರ್ ದೀಪಗಳು ತಿಂಗಳೊಳಗೆ ಕೆಟ್ಟು ಗುಜರಿ ಅಂಗಡಿ ಸೇರಿತ್ತು. ಬಳಿಕ ಇತ್ತೀಚೆಗೆ ಸರಕಾರ ಮೆಸ್ಕಾಂ ಇಲಾಖೆಯ ಮೂಲಕ ಸೌಭಾಗ್ಯ ಯೋಜನೆಯಡಿಯಲ್ಲಿ ಇಲ್ಲಿನ ಮಲೆಕುಡಿಯ ಕುಟುಂಬಗಳ ಮನೆಗಳಿಗೆ ಸೋಲಾರ್ ಸಂಪರ್ಕ ನೀಡಿದರೂ ಕೆಲವೊಂದು ಮನೆಗಳಲ್ಲಿ ಬಲ್ಬುಗಳು ಉರಿಯುವುದೇ ಇಲ್ಲ. ವಿದ್ಯುತ್ ವಂಚಿತ ಮನೆಗಳಿಗೆ ಚಿಮಿಣಿ ದೀಪಗಳ ಮಬ್ಬು ಬೆಳಕೇ ಗತಿಯಾಗಿದೆ.