ಮಂಗಳೂರು, ಜು 26 (Daijiworld News/MSP): ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಾಹ ಸಮಾರಂಭದಲ್ಲಿ ಎರಡೂವರೆ ಪವನ್ ಚಿನ್ನದ ಅಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 24 ರ ಬುಧವಾರ ಈ ಸಭಾಂಗಣದಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದು, ಮದುವೆಗೆ ಬಂದಿದ್ದ 2 ವರ್ಷದ ಮಗುವನ್ನು ಸುಮಾರು ಮಧ್ಯಾಹ್ನ 2.30 ರ ವೇಳೆಗೆ ಎಳೆದೊಯ್ದು ಬುರ್ಕಾಧಾರಿ ಮಹಿಳೆ ಮಗು ಧರಿಸಿದ್ದ ಒಂದು 1.5 ಪವನ್ ಚಿನ್ನದ ಸರ ಮತ್ತು ಒಂದು ಪವನ್ ಬಳೆಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಕಳವು ಮಾಡಿದ ಸೊತ್ತುಗಳ ಮೌಲ್ಯ 49,000 ರೂ. ಎಂದು ಅಂದಾಜಿಸಲಾಗಿಸಿದೆ. ಇನ್ನು ಮಹಿಳೆ ಮಗುವಿನ ಚಿನ್ನಾಭರಣ ಕಳವು ಮಾಡುತ್ತಿರುವ ದೃಶ್ಯ ಹಾಲ್ ನ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು, ಈ ದೃಶ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.