ಮಂಗಳೂರು, ಜು26(Daijiworld News/SS): 20ನೇ ವರ್ಷದ ಕಾರ್ಗಿಲ್ ವಿಜಯ ದಿವಸವನ್ನು ಕರಾವಳಿಯ ಹಲವೆಡೆ ಸಂಭ್ರಮದಿಂದ ಆಚರಿಸಲಾಯಿತು. 'ಕಾರ್ಗಿಲ್ ವಿಜಯೋತ್ಸವ' ಹಿನ್ನೆಲೆಯಲ್ಲಿ "ವೇದವ್ಯಾಸ ಕಾಮತ್ ಫ್ಯಾನ್ಸ್ ಕುಡ್ಲ" ವತಿಯಿಂದ ಕದ್ರಿಯಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆಯ ಮೂಲಕ ಗೌರವ ಸಲ್ಲಿಸಲಾಯಿತು.
ಈ ವೇಳೆ ಹಿಂದೂ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಆರ್. ಶೆಟ್ಟಿ ಅಡ್ಯಾರ್ ಮಾತನಾಡಿ, ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧರನ್ನು ಸ್ಮರಿಸುವ ದೇಶಭಕ್ತ ಕೆಲಸಗಳು ನಿರಂತರವಾಗಿ ನಡೆಯಬೇಕು. ನಮಗೆ ದೇಶಕ್ಕಾಗಿ ಪ್ರಾಣ ನೀಡುವ ಅವಕಾಶ ಸಿಗದಿರಬಹುದು. ಆದರೆ ಯೋಧರಿಗೆ ನೈತಿಕ ಬೆಂಬಲ ನೀಡುವ ಪುಣ್ಯಭೂಮಿಯಲ್ಲಿ ನಾವು ಹುಟ್ಟಿದ್ದೇವೆ. ಆದ್ದರಿಂದ ದೇಶಕ್ಕಾಗಿ ಬಲಿದಾನ ಮಾಡಿದ ವೀರ ಯೋಧರನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ ದಿನ ಯುದ್ಧದಲ್ಲಿ ಮಡಿದ ನಮ್ಮ ಧೀರ ಯೋಧರ ತ್ಯಾಗಕ್ಕೆ ಗೌರವ ಸೂಚಿಸಬೇಕೆಂದು ಹೇಳಿದರು.
ಇದೇ ವೇಳೆ ಕದ್ರಿ ಕ್ರಿಕೆಟರ್ಸ್'ನ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಿ ಮೋದಿಯವರು ಸೈನಿಕರಿಗೆ ಸ್ಫೂರ್ತಿ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಯೋಧರ ಗೆಲುವಿನ ಸಂದರ್ಭಗಳಲ್ಲಿ ಸಿಹಿ ಹಂಚಿ, ಅವರನ್ನು ಶ್ಲಾಘಿಸಿ ಮನೋಸ್ಥೈರ್ಯ ಹೆಚ್ಚಿಸಿದ್ದಾರೆ. ಮೋದಿ ಸೈನಿಕರಿಗೆ ತೋರಿದ ಗೌರವ, ಪ್ರೀತಿ ಶತ್ರು ರಾಷ್ಟ್ರದ ನೈತಿಕತೆಯನ್ನೇ ಕುಸಿಯುವಂತೆ ಮಾಡಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಹಿಂದೂ ಸಂರಕ್ಷಣಾ ಸಮಿತಿಯ ಮುಖಂಡರಾದ ಕಾರ್ತಿಕ್ ಬರ್ಕೆ, ಗಣೇಶ್ ಕುಲಾಲ್ ಕೆದಿಲ, ನಿತಿನ್ ಭಂಡಾರಿ, ದೀಕ್ಷಿತ್ ಕಡೇಶಿವಾಲಯ, ಖ್ಯಾತ ವೆಕ್ಟರ್ ಚಿತ್ರಗಾರ ಶಶಾಂಕ್ ಆಚಾರ್ಯ, ಚರಿತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.