ಕುಂದಾಪುರ, ಜು 26 (Daijiworld News/MSP): ಭಾರತಕ್ಕೆ ಆಗಮಿಸಿರುವ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ. ಇದು ಇವರ ಖಾಸಗಿ ಭೇಟಿಯಾಗಿದ್ದು, ಕೊಲ್ಲೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಆ ಬಳಿಕ ಉಡುಪಿಗೆ ಭೇಟಿ ನೀಡಲಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಅವರು ಶುಕ್ರವಾರ ಬೆಳಿಗ್ಗೆ 8.40 ಗಂಟೆ ಆಗಮಿಸಿದ ಅವರು ಹವಾಮಾನ ವೈಪರೀತ್ಯದ ಹಿನ್ನಲೆಯಲ್ಲಿ ರಸ್ತೆ ಮೂಲಕ ಕೊಲ್ಲೂರಿನತ್ತ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭ ರಸ್ತೆಯುದ್ದಕ್ಕೂ ತೀವ್ರ ಭದ್ರತೆ ಏರ್ಪಡಿಸಲಾಗಿತ್ತು. ವಿಕ್ರಂ ಸಿಂಘೆ ಆಗಮನದ ಪ್ರಯುಕ್ತ ಭದ್ರತಾ ಹಿತದೃಷ್ಟಿಯಿಂದ ಶುಕ್ರವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30ರ ವರೆಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಈ ನಡುವೆ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಂ ಸಿಂಘೆ ಆಗಮನಕ್ಕೂ ಐದು ನಿಮಿಷ ಮೊದಲು ಮಾಧ್ಯಮ ಮಿತ್ರರಿಗೆ ಜಿಲ್ಲಾಡಳಿತ ನೀಡಿದ ಪಾಸನ್ನು ರದ್ದುಗೊಳಿಸಿ, ಛಾಯಾಚಿತ್ರ ತೆಗೆಯದಂತೆ ನಿರ್ಬಂಧ ಹೇರಿದೆ. ರನಿಲ್ ವಿಕ್ರಂ ಸಿಂಘೆ ಅವರ ಖಾಸಗಿ ಕಾರ್ಯಕ್ರಮವಾದ ಹಿನ್ನಲೆಯಲ್ಲಿ ಕೊನೆಕ್ಷಣದಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಉಡುಪಿ ಭೇಟಿಯ ಬಳಿಕ ಪ್ರಧಾನಿ ಬೇಕಲದತ್ತ ಪ್ರಯಾಣಿಸಿ ಅಲ್ಲೆ ತಂಗಲಿದ್ದಾರೆ. ಆ ಬಳಿಕ ಶನಿವಾರ ಬೆಳಗ್ಗೆ ಕುಂಬಳೆಯ ಬೇಳದಲ್ಲಿರುವ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ನಿಯಂತ್ರಣ ಹೇರಲಾಗಿದೆ.