ಮಂಗಳೂರು, ಜು 26(Daijiworld News/RD): ಮುಂಜಾನೆಯಿಂದ ಸುರಿದ ಧಾರಾಕಾರ ಮಳೆಗೆ ನಗರದಲ್ಲಿ ವಾಹನ ಸಂಚಾರಕ್ಕೆ ಅಲ್ಲಲ್ಲಿ ಅಡ್ಡಿ ಉಂಟಾಗಿರುವುದು ವರದಿಯಾಗಿದೆ. ಈಗಾಗಲೇ ನಗರದ ರೈಲ್ವೆ ನಿಲ್ದಾಣವು ಜಲಾವೃತಗೊಂಡಿದೆ. ಜೊತೆಗೆ ಪಡೀಲ್ನಲ್ಲಿರುವ ರೈಲ್ವೆ ಅಂಡರ್ ಪಾಸ್ನಲ್ಲಿ ಮಳೆ ನೀರು ಶೇಖರಣೆಗೊಂಡು ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.
ಪಡೀಲ್ನಲ್ಲಿರುವ ರೈಲ್ವೆ ಅಂಡರ್ ಪಾಸ್ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ಶೇಖರಣೆಗೊಂಡಿದ್ದು, ವಾಹನ ಸವಾರರು ತೀವ್ರ ಸಂಕಷ್ಟಕ್ಕೊಳಗಾದರು. ಕೇಂದ್ರ ರೈಲ್ವೆ ನಿಲ್ದಾಣ ಮತ್ತು ಹತ್ತಿರದ ಪ್ರದೇಶವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ನಿಲ್ದಾಣದ ಪ್ಲಾಟ್ಫಾರ್ಮ್ ಮತ್ತು ಕ್ಲಾಕ್ ರೂಮ್ಗೆ ನೀರು ಪ್ರವೇಶಿಸಿತು.
ಇದರಿಂದಾಗಿ ನಿಲ್ದಾಣದಲ್ಲಿ ಪ್ರಯಾಣಿಕರು ತೀರಾ ತೊಂದರೆ ಎದುರಿಸುವಂತೆ ಆಯಿತು.ಎಂದಿನಂತೆ ಮಕ್ಕಳಿಗೆ ಇಂದು ಶಾಲಾ ಕಾಲೇಜು ಇದ್ದ ಕಾರಣ ಕಾಸರಗೋಡು, ಉಡುಪಿ ಮತ್ತು ಪುತ್ತೂರಿನ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಯಿತು.
ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಗಳು ನೀರಿನಿಂದ ಆವೃತವಾಗಿದ್ದು, ಟ್ಯಾಕ್ಸಿ ಚಾಲಕರು ತಮ್ಮ ವಾಹನಗಳನ್ನು ನಿಲ್ದಾಣಕ್ಕೆ ತರಲು ಅಸಾಧ್ಯವಾಯಿತು. ಈ ಕಾರಣದಿಂದಾಗಿ ಬೆಳಿಗ್ಗೆ ರೈಲ್ವೇ ಪ್ರಯಾಣ ಬೆಳೆಸಲು ಸಜ್ಜಾಗಿದ್ದ ಅನೇಕ ಪ್ರಯಾಣಿಕರಿಗೆ ಆತಂಕ ಪರಿಸ್ಥಿತಿ ನಿರ್ಮಾಣವಾಯಿತು.