ಕಾಸರಗೋಡು, ಜು 26 (Daijiworld News/MSP): ಕಾಸರಗೋಡು ನಗರಸಭೆಯ ಕೆಲ ಪ್ರದೇಶಗಳಲ್ಲಿ ಹಳದಿ ಕಾಮಾಲೆ ( ಜಾಂಡಿಸ್ ) ಪತ್ತೆಯಾಗಿದ್ದು , ಜನತೆಯಲ್ಲಿ ಆತಂಕ ಮನೆ ಮಾಡಿದೆ. ನಗರಸಭಾ ವ್ಯಾಪ್ತಿಯ ಬೆದಿರ, ಚಾಲ, ಕಡವತ್, ಚಾಲಕುನ್ನು ಮೊದಲಾದ ಪ್ರದೇಶಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಳದಿ ಕಾಮಾಲೆ ಪತ್ತೆಯಾಗಿದೆ. ಈ ಪರಿಸರದ 140ಕ್ಕೂ ಅಧಿಕ ಮಂದಿಯಲ್ಲಿ ಹಳದಿ ಕಾಮಾಲೆ ಲಕ್ಷಣ ಪತ್ತೆಯಾಗಿದೆ . ಈ ಪೈಕಿ 13 ಮಂದಿಯಲ್ಲಿ ಜಾಂಡಿಸ್ (ಹೆಪಟೈಟಿಸ್ ) ದೃಢಪಟ್ಟಿದೆ.
ರೋಗ ಪತ್ತೆಯಾದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದ್ದು , ಜನರಿಗೆ ಅರಿವು ಮೂಡಿಸುವ ಜೊತೆಗೆ ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಪ್ರತಿರೋಧ ಚಟುವಟಿಕೆಗಳಿಗಾಗಿ ವಿಶೇಷ ವೈದ್ಯಕೀಯ ತಂಡವನ್ನು ನೇಮಿಸಲಾಗಿದೆ.
ಆರೋಗ್ಯಾಧಿಕಾರಿ ಬಿ.ಅಶ್ರಫ್ ಅವರ ನೇತೃತ್ವದಲ್ಲಿ ಹತ್ತು ಮಂದಿ ಜೂನಿಯರ್ ಹೆಲ್ತ್ ಇನ್ಸ್ ಪೆಕ್ಟರರು ಈ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಜನಪ್ರತಿನಿಧಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾಸಂಘಟನೆ ಪ್ರತಿನಿಧಿಗಳು ಮೊದಲಾದವರ ಸಹಕಾರದೊಂದಿಗೆ ಈ ಕಾರ್ಯ ನಡೆಯುತ್ತಿದೆ. ತಲಾ ಹತ್ತು ಮಂದಿಯ ತಂಡ ರೋಗಬಾಧಿತ ಪ್ರದೇಶಗಳ ಎಲ್ಲಾ ಮನೆಗಳಲ್ಲೂ ಕಾರ್ಯಾಚರಣೆ ನಡೆಸುತ್ತಿವೆ. ಕುಡಿಯುವ ನೀರಿನ ಜಲಾಶಯಗಳ ಪರಿಶೀಲನೆ, ಕ್ಲೋರಿನೇಷನ್, ಮೆಡಿಕಲ್ ಕ್ಯಾಂಪ್, ಶಾಲೆ-ಅಂಗನವಾಡಿಗಳಲ್ಲಿ ಪರಿಶೀಲನೆ, ಧ್ವನಿವರ್ಧಕ ಮೂಲಕ ಜಾಗೃತಿ ಘೋಷಣೆ, ಜಾಗೃತಿ ತರಗತಿಗಳು, ವಲಯಗಳ ಹೊಟೆಲ್, ಬೇಕರಿ, ಬೀದಿ ಬದಿಯ ವಾಪಾರ ಸಂಸ್ಥೇಗಳ ಪರಿಶೀಲನೆ ನಡೆಸುತ್ತಿದೆ . ಈ ಪ್ರದೇಶಗಳ ಎಲ್ಲ ಬಾವಿಗಳ ಕ್ಲೋರಿನೈಸೇಷನ್ ಪೂರ್ಣಗೊಳ್ಳುತ್ತಿದೆ. ಜೊತೆಗೆ ಮನೆಗಳಲ್ಲಿ ಕ್ಲೋರಿನ್ ಗುಳಿಗೆಗಳ ವಿತರಣೆಯೂ ನಡೆಯುತ್ತಿದೆ. 20 ಲೀಟರ್ ನೀರಿಗೆ ಒಂದು ಟ್ಯಾಬ್ಲೆಟ್ ನಂತೆ ಬಳಸಬೇಕು. ಈಗಾಗಲೇ 155 ಮನೆಗಳ ಸಂದರ್ಶನ ಪೂರ್ಣಗೊಂಡಿದೆ.
ಈಗಾಗಲೇ ವೈದ್ಯಕೀಯ ಶಿಬಿರ , ತಪಾಸಣೆ ನಡೆಸಲಾಗುತ್ತಿದೆ. ರೋಗ ಹತೋಟಿಗೆ ತರುವ ನಿಟ್ಟಿನಲ್ಲಿ ಹಾಗೂ ರೋಗ ಹರಡದಂತೆ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದು, ಜನರಿಗೆ ಮಾಹಿತಿಯನ್ನು ನೀಡುವ ಕಾರ್ಯ ನಡೆಯುತ್ತಿದೆ.