ಬೆಂಗಳೂರು, ಜು 26 (Daijiworld News/MSP): ಲಂಚ ಪಡೆದ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ತೂರು ತಹಶೀಲ್ದಾರ್ ಡಾ| ಪ್ರದೀಪ್ ಕುಮಾರ್ ಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಪ್ರದೀಪ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ| ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಆರೋಪಿಯು ಒಂದು ಲಕ್ಷದ ರೂ. ಮೊತ್ತದ ಬಾಂಡ್ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು, ಸಾಕ್ಷ್ಯ ನಾಶಪಡಿಸಬಾರದು ಎಂದು ಷರತ್ತುಗಳನ್ನು ವಿಧಿಸಿ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.
ಈ ಹಿಂದೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳೂರು ಸೆಷನ್ಸ್ ನ್ಯಾಯಾಲಯ ವಜಾ ಮಾಡಿತ್ತು. ಪುತ್ತೂರಿನ ಪೈ ಕೇಟರರ್ಸ್ ನ ದಿನೇಶ್ ಪೈ ಅವರಿಂದ 1.25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಎಸ್ಪಿ ಉಮಾ ಪ್ರಶಾಂತ್ ಮತ್ತು ಇನ್ ಪೆಕ್ಟರ್ ಯೋಗೀಶ್ ಕುಮಾರ್ ತಂಡ ದಾಳಿ ನಡೆಸಿ ತಹಶೀಲ್ದಾರ್ ಪ್ರದೀಪ್ ಕುಮಾರ್ ಅವರನ್ನು ಬಂಧಿಸಿತ್ತು.
ಪರ್ಲಡ್ಕದ ಪೈ ಕೆಟರರ್ಸ್ ಮಾಲೀಕ ದಿನೇಶ್ ಪೈ ಅವರಿಂದ ಲಂಚ ಪಡೆದ ಆರೋಪದಡಿ ಜೂನ್ 20ರಂದು ಬಂಧನಕ್ಕೊಳಗಾಗಿದ್ದ ಪ್ರದೀಪ್ ಕುಮಾರ್ ಅವರು ಆ ನಂತರ ನ್ಯಾಯಾಂಗ ಬಂಧನದಲ್ಲಿದ್ದರು.
ಮಂಗಳೂರಿನ ಕಾರಾಗೃಹದಲ್ಲಿದ್ದ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ವಜಾಗೊಳಿಸಿದ್ದರು. ಆ ಬಳಿಕ ಅವರು ಹೈ ಕೋರ್ಟ್ ಮೊರೆಹೋಗಿದ್ದರು.