ಉಡುಪಿ, ಜು26(Daijiworld News/SS): ಜ್ಯೋತಿಷಿ, ವೈದ್ಯರು, ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಮಹಿಳೆ ಮೈಮುಟ್ಟುವಂತೆ ವಿಡಿಯೋ ಚಿತ್ರಿಕರಿಸಿ, ಬಳಿಕ ಅದನ್ನು ಮುಂದಿಟ್ಟು ಬೆದರಿಸಿ ಲಕ್ಷಾಂತರ ರೂ ವಸೂಲಿ ಮಾಡುತ್ತಿದ್ದ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಹೆಬ್ರಿ, ಬೇಳಿಂಜೆ ಗ್ರಾಮದ ಸುಮಾ ಯಾನೆ ಸುನಂದಾ, ಜನ್ನಾಡಿ ನಿವಾಸಿ ಕಿರಣ್ ಯಾನೆ ಶಶಾಂಕ್ ಶೆಟ್ಟಿ ಬಂಧಿತ ಆರೋಪಿಗಳು.
ಜುಲೈ 17ರಂದು ಒಟ್ಟು ನಾಲ್ವರು ಆರೋಪಿಗಳು ಒಳ ಸಂಚು ರೂಪಿಸಿ ಹೆಬ್ರಿ ಅರ್ಧನಾರೀಶ್ವರ ದೇವಳ ಅರ್ಚಕ ಮತ್ತು ಜೋತಿಷಿ ರಮೇಶ್ ಭಟ್ ಅವರ ಬಳಿ ಭವಿಷ್ಯ ಕೇಳುವ ನೆಪದಲ್ಲಿ ತೆರಳಿದ್ದರು. ರಮೇಶ್ ಭಟ್ ಅವರಲ್ಲಿ ನನ್ನ ಎದೆಭಾಗದಲ್ಲಿ ತುರಿಕೆ ಬರುತ್ತಿದೆ. ಸರ್ಪ ಸುತ್ತು ಆಗಿರಬಹುದು. ತನ್ನನ್ನು ಮುಟ್ಟಿ ಪರೀಕ್ಷಿಸಿ ಹೇಳಿ ಎಂದು ವಿಶ್ವಾಸ ಬರುವ ಹಾಗೆ ಮಾತನಾಡಿ, ಈ ದೃಶ್ಯವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದರು. ಬಳಿಕ ಜುಲೈ 19ರಂದು ಕಿರಣ್ ಯಾನೆ ಶಶಾಂಕ್ ಹಾಗೂ ಮಂಜುನಾಥ್ ಅರ್ಚಕ ರಮೇಶ್ ಭಟ್ಗೆ ಈ ವಿಡಿಯೋ ಕಳುಹಿಸಿ, 40 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಹೆದರಿದ ಅವರು 80 ಸಾವಿರ ರೂ ಹಣ ನೀಡಿದ್ದಾರೆ.
ಬಳಿಕ ರಮೇಶ್ ಭಟ್ ಹೆಬ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಿ ಸುಮಾ, ಗಂಡ ರಾಘವೇಂದ್ರ ಇವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗಳಿಂದ ಡಸ್ಟರ್ ಕಾರು, ಬೈಕು, ಏಳು ಮೊಬೈಲ್, ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಸುಮ ಹಾಗೂ ಕಿರಣ ಯಾನೆ ಶಶಾಂಕ್ ಶೆಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಇನ್ನಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.