ಮಂಗಳೂರು, ಜು26(Daijiworld News/SS): ವಿದ್ಯುತ್ ಬಿಲ್ ಕಟ್ಟಿದ ಬಳಿಕ ಮನೆಯ ಫ್ಯೂಸ್ ಹಾಕಲು ಬಂದ ಕುಲಶೇಖರ ಮೆಸ್ಕಾಂ ಸಿಬ್ಬಂದಿ ಮೇಲೆ ಮೂವರು ಸೇರಿ ಹಲ್ಲೆ ನಡೆಸಿದ ಘಟನೆ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿಯಲ್ಲಿ ನಡೆದಿದೆ.
ಬಸವರಾಜ್(45) ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿ.
ನಾಗುರಿಯಲ್ಲಿರುವ ಮನೆಯೊಂದರ ವಿದ್ಯುತ್ ಬಿಲ್ ಕಟ್ಟದ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆ ಹೋಗಿ ಫ್ಯೂಸ್ ತೆಗೆದುಕೊಂಡು ಹೋಗಿದ್ದರು. ಬಳಿಕ ಮನೆ ಮಾಲಕರು ಮೆಸ್ಕಾಂ ಕಚೇರಿಗೆ ತೆರಳಿ ಬಿಲ್ ಪಾವತಿಸಿದ್ದರು. ಈ ಹಿನ್ನೆಲೆಯಲ್ಲಿ, ಲೈನ್ಮ್ಯಾನ್ ಬಸವರಾಜ್ ಮತ್ತೆ ಸಂಜೆ 3 ಗಂಟೆಗೆ ಫ್ಯೂಸ್ ಹಾಕಲೆಂದು ಅದೇ ಮನೆಗೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ಆರೋಪಿಗಳು ಬಸವರಾಜ್ ಮೇಲೆ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಈ ಕುರಿತು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ವಿಚಾರಣೆ ನಡೆದಿದೆ.