ಬಂಟ್ವಾಳ, ಜು 24 (Daijiworld News/SM): ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಸುರಿದಂತಹ ಮಳೆ ಗುರುವಾರದಂದು ಒಂದಿಷ್ಟು ಬಿಡುವು ನೀಡಿತ್ತು.
ನಿರಂತರ ಸುರಿದ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ಹಲವೆಡೆಗಳಲ್ಲಿ ಹಾನಿ ಸಂಭವಿಸಿದೆ. ಬುಧವಾರ ರಾತ್ರಿಯ ಬಳಿಕ ಸುರಿದ ಮಳೆಗೆ ಅಲ್ಲಲ್ಲಿ ಗುಡ್ಡ, ಆವರಣ ಗೋಡೆ ಕುಸಿತ ಹಾಗೂ ಮನೆಗಳಿಗೆ ಹಾನಿಯನ್ನುಂಟು ಮಾಡಿದೆ.
ಬುಧವಾರ ರಾತ್ರಿ ಸುರಿದ ಮಳೆಗೆ ಮಂಚಿ ಗ್ರಾಮದ ಪತ್ತುಮುಡಿ ಎಂಬಲ್ಲಿ ಮುಹಮ್ಮದ್ ಇಝಾತ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದು ಸುಮಾರು ೨೦ ಸಾವಿರ ರೂ. ನಷ್ಟ ಸಂಭವಿಸಿದೆ.
ವಿಟ್ಲ ಕಸಬ ಗ್ರಾಮದ ಪುರುಷೋತ್ತಮ ಅಚಾರಿ ಎಂಬವರ ಕಚ್ಛಾ ಮನೆಗೆ, ದೇವಸ್ಯಪಡೂರು ಗ್ರಾಮದ ಶಾಂತಿಪ್ರಸಾದ್ ಎಂಬವರ ಮನೆಗೆ ಹಾನಿ ಸಂಭವಿಸಿದೆ. ಹಾಗೂ ಇದೇ ಗ್ರಾಮದ ಸತ್ಯ ವಿಜಯ್ರಾವ್ ಎಂಬವರಿಗೆ ಸೇರಿದ ಶೆಡ್ ಹಾಗೂ ಕೊಠಡಿ ಸಂಪೂರ್ಣ ಕುಸಿದು ಬಿದ್ದಿದೆ. ತಾಲೂಕಿನ ವಿವಿಧೆಡೆಗಳಲ್ಲಿ ಉಂಟಾದ ಹಾನಿಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಅಂದಾಜಿಸಲಾಗಿದೆ.