ಬಂಟ್ವಾಳ, ಜು 25 (Daijiworld News/SM): ಕಾಡು ಕೋಣವೊಂದು ರೈಲು ಬರುವ ವೇಳೆ ಓಡಿ ಹೋಗಿ ಮರದ ನಡುವೆ ಸಿಲುಕಿ ಸಾವನ್ನಪ್ಪಿದ ಘಟನೆಯೊಂದು ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸಾಗು ಗಂಗೆಪಾಲು ಎಂಬಲ್ಲಿ ಜುಲೈ ೨೫ರ ಗುರುವಾರ ಬೆಳಿಗ್ಗೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು 4 ವರ್ಷ ಪ್ರಾಯದ ಗಂಡು ಕಾಡುಕೋಣವೊಂದು ರೈಲು ಹಳಿಯನ್ನು ದಾಟುವ ವೇಳೆ ರೈಲಿನ ಶಬ್ದ ಕೇಳಿಸಿದೆ ಎನ್ನಲ್ಗಿದ್ದು, ಈ ವೇಳೆ ಓಡಿ ಹೋಗಿ ಮರಕ್ಕೆ ಕತ್ತು ಹಾಗೂ ಕೊಂಬು ಸಿಲುಕಿಕೊಂಡಿದೆ. ಪರಿಣಾಮ ಕತ್ತು ತುಂಡಾಗಿ ಕೋಣ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಸಂಜೆಯ ವೇಳೆ ಸ್ಥಳೀಯರು ಗುಡ್ಡೆಗೆ ಸೊಪ್ಪು ತರಲು ಹೋಗುವ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳಾದ ಜಿತೇಶ್, ಯಶೋಧರ, ದಯಾನಂದ, ಕ್ಯಾತಲಿಂಗ , ಪ್ರವೀಣ್ ಮತ್ತು ಯೋಗೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕಾಡುಕೋಣದ ಮೃತದೇಹವನ್ನು ತೆರವುಗೊಳಿಸಲಾಗಿದೆ.