ಕಾಸರಗೋಡು, ಜು 25 (Daijiworld News/SM): ಮಂಜೇಶ್ವರ ಸಮೀಪದ ವರ್ಕಾಡಿ ಕಳಿಯೂರಿನಿಂದ ಅಪಹರಣಕ್ಕೀಡಾಗಿದ್ದ ಕಾಲೇಜು ವಿದ್ಯಾರ್ಥಿ ಹಾರಿಸ್(17) ಇಂದು ಬೆಳಿಗ್ಗೆ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಅಪಹರಣದ ಹಿಂದಿನ ಕಥೆ ಪ್ರಶ್ನೆಯಾಗಿ ಉಳಿದುಕೊಂಡಿದೆ.
ಮಂಗಳೂರಿನ ಪಂಪ್ ವೆಲ್ ನಿಂದ ಹಾರಿಸ್ ನನ್ನು ಪತ್ತೆ ಹಚ್ಚಲಾಗಿದೆ. ಅಪಹರಣ ನಡೆಸಿದ ತಂಡವು ಪಂಪ್ ವೆಲ್ ನಲ್ಲಿ ಈತನನ್ನು ಬಿಟ್ಟಿದ್ದಾರೆ. ಇದರಂತೆ ಹಾರಿಸ್ ನ ಸಂಬಂಧಿಕರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾರಿಸ್ ನನ್ನು ವಶಕ್ಕೆ ಪಡೆದು ಮಂಜೇಶ್ವರಕ್ಕೆ ಕರೆದೊಯ್ದಿದ್ದರು. ಕುಂಬಳೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಬಳಿಕ ಮಾಹಿತಿ ಕಲೆ ಹಾಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತಲಪಿಸಲಾಯಿತು. ವಿದ್ಯಾರ್ಥಿಯಿಂದ ಕೆಲ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ತೊಕ್ಕೊಟ್ಟಿನ ಖಾಸಗಿ ಕಾಲೇಜೊಂದರ ಪಿ.ಯು. ವಿದ್ಯಾರ್ಥಿಯಾಗಿರುವ ಹಾರಿಸ್ ನನ್ನು ಜುಲೈ 22ರಂದು ತಂಡವೊಂದು ಅಪಹರಿಸಿತ್ತು. ಬೆಳಿಗ್ಗೆ ೭.೩೦ರ ಸುಮಾರಿಗೆ ತನ್ನ ಸಹೋದರಿ ಜೊತೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳುತ್ತಿದ್ದ ಹಾರಿಸ್ ನನ್ನು ಕಾರೊಂದರಲ್ಲಿ ಬಂದ ತಂಡವೊಂದು ದಾರಿ ಮಧ್ಯೆ ಅಡ್ಡಗಟ್ಟಿ ಅಪಹರಿಸಿತ್ತು. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿತ್ತು.
ವಿದ್ಯಾರ್ಥಿಯ ಅಪಹರಣ ಹಿಂದೆ ಚಿನ್ನಾಭರಣ ವಹಿವಾಟು ಕಾರಣವೇ?
ವಿದ್ಯಾರ್ಥಿ ಹಾರಿಸ್ ನ ಅಪಹರಣದ ಹಿಂದೆ ಸಂಬಂಧಿಕರ ನಡುವಿನ ಚಿನ್ನಾಭರಣ ಸಾಗಾಟ ವಹಿವಾಟು ಕಾರಣವೇ ಎಂಬ ಸಂಶಯ ಕೇಳಿಬರುತ್ತಿದೆ. ಸಂಬಂಧಿಕರ ನಡುವಿನ ಚಿನ್ನಾಭರಣ ಸಾಗಾಟಕ್ಕೆ ಸಂಬಂಧಪಟ್ಟಂತೆ ತಂಡದೊಳಗೆ ಉಂಟಾದ ವಿವಾದ ಹಾರಿಸ್ ನ ಅಪಹರಣಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.