ಬೆಳ್ಮಣ್, ಜು 25 (Daijiworld News/RD): ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಜರಕಟ್ಟೆಯಲ್ಲಿ ಕಾರ್ಯಚರಿಸುತ್ತಿರುವ ಬ್ರೈಟ್ ಫ್ಲೆಕ್ಸಿ ಇಂಟರ್ನ್ಯಾಷನಲ್ (ಪ್ರೈ)ಲಿಮಿಟೆಡ್ ಎಂಬ ಹೆಸರಿನ ಗೋಣಿಚೀಲ ತಯಾರಿಕಾ ಕಾರ್ಖಾನೆಯ ತ್ಯಾಜ್ಯ ಹಾಗೂ ಕೊಳಚೆ ನೀರು ವಿಲೇವಾರಿ ಸಾರ್ವಜನಿಕ ಪ್ರದೇಶದಲ್ಲಿ ಹರಿದಾಡುತ್ತಿದ್ದು, ಅಸಮರ್ಪಕವಾಗಿರುವ ವ್ಯವಸ್ಥೆಯ ಬಗ್ಗೆ ಕೂಡಲೇ ಕಾರ್ಖಾನೆ ಎಚ್ಚೆತ್ತುಕೊಂಡು ಸರಿಪಡಿಸುವಂತೆ ಆಗ್ರಹಿಸಿ ಗುರುವಾರ ಕಾರ್ಖಾನೆಯ ಅಧಿಕಾರಿಗಳಿಗೆ ಮನವಿ ನೀಡಿದರು.
ಈ ಕಂಪನಿಯಿಂದ ತ್ಯಾಜ್ಯ ನೀರು ರಸ್ತೆಯ ಬದಿಯಲ್ಲಿರುವ ಚರಂಡಿಯಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ, ಹೊರಗೆ ಹರಿಯ ಬಿಡುತ್ತಿರುವ ಈ ತ್ಯಾಜ್ಯಗಳಿಂದ ಕೃಷಿ ಭೂಮಿ, ಸಾರ್ವಜನಿಕರ ಬಾವಿ ಹಾಗೂ ನಾಗಬನಗಳಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ಇನ್ನಾ ಗ್ರಾಮದ ಸಾರ್ವಜನಿಕರು ಹಾಗೂ ಪಂಚಾಯತ್ ಆಡಳಿತ, ಹತ್ತು ಹಲವು ದೂರುಗಳನ್ನು ಉಲ್ಲೇಖಿಸಿದ್ದ ಮನವಿ ಪತ್ರದಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಇನ್ನಾ ಗ್ರಾಮ ಪಂಚಾಯತ್ ಆಧ್ಯಕ್ಷೆ ಬಬಿತಾ ,ಉಪಾಧ್ಯಕ್ಷೆ ಕುಶಾ ಆರ್.ಮೂಲ್ಯ, ಸದಸ್ಯರಾದ ದೀಪಕ್ ಕೋಟ್ಯಾನ್, ಆಲೆನ್ ಡಿಸೋಜಾ ಮತ್ತಿತರರು ಪಂಚಾಯತ್ ವತಿಯಿಂದ ಮನವಿ ನೀಡಿದರು, ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮತ್ತಿತರರು ಮತ್ತೊಂದು ಮನವಿ ನೀಡಿದರು. ಈ ಮನವಿಗಳಲ್ಲಿ ಕೇವಲ ತ್ಯಾಜ್ಯ, ಕೊಳಚೆ ನೀರು ಬಿಡುವ ಬಗ್ಗೆ ಮಾತ್ರವಲ್ಲದೆ ಕಾರ್ಖಾನೆಯ ಸಿಬ್ಬಂದಿಗಳ ಅನುಚಿತ ವರ್ತನೆ, ದಾದಾಗಿರಿ, ಹುಡುಗಿಯರಿಗೆ ಚುಡಾಯಿಸುವಿಕೆ, ಕೊಳಚೆ ನೀರು ಸಂಗ್ರಹದಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ, ನಿರಂತರ ಸೊಳ್ಳೆಗಳ ಕಾಟ ಹೀಗೆ ಹಲವಾರು ದೂರುಗಳನ್ನು ಮನವಿಯಲ್ಲಿ ಉಲ್ಲೇಖಿಸಲ್ಪಟ್ಟಿದ್ದವು.
ಕಾರ್ಖಾನೆಯ ಪರವಾಗಿ ಅಧಿಕಾರಿ ಗಣೇಶ್ ಪೈ ಮನವಿ ಸ್ವೀಕರಿಸಿ ತಮ್ಮ ಕಡೆಯಿಂದ ತಪ್ಪುಗಳಾದ ಬಗ್ಗೆ ಒಪ್ಪಿಕೊಂಡು ಮುಂದೆ ಸರಿ ಮಾಡುವುದಾಗಿ ತಿಳಿಸಿದರು. ಕಂಪನಿಯ ಅನಿಲ್, ಮಹೇಂದ್ರ ಗಾಂಧಿ, ಅವಿನಾಶ್ ಗ್ರಾಮಸ್ಥರಿಗೆ ಯಾವುದೇ ತೊಂದರೆಗಳು ನಡೆಯದಂತೆ ಮುಂದೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಾರ್ಖಾನೆಯ ವಿರುದ್ಧ ಪ್ರತಿಭಟನೆ ನಡೆಸಲೆಂದೇ ನೂರಾರು ಜನ ಆಕ್ರೋಶದಿಂದ ಸೇರಿದ್ದು ಸ್ಥಳಕ್ಕಾಗಮಿಸಿದ ಪಡುಬಿದ್ರಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರತಿಭಟನೆಗೆ ಪರವಾನಿಗೆ ಮಾಡಿಲ್ಲ ಎಂದ ಬಳಿಕ ಹೋರಾಟವನ್ನು ಕೇವಲ ಮನವಿ ನೀಡುವುದಕ್ಕೆ ಸೀಮಿತಗೊಳಿಸಲಾಯಿತು. ಪಡುಬಿದ್ರಿ ಪೊಲೀಸರ ಸಮಯಪ್ರಜ್ನೆ ಆತಂಕ ದೂರ ಮಾಡಿತು. ಆದರೆ ಕಾರ್ಖಾನೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಸೇರಿದ್ದ ಗ್ರಾಮಸ್ಥರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.