ವಿಟ್ಲ, ಜು 25(Daijiworld News/MSP): ವಿಟ್ಲ ಸಮೀಪದ ಸುತ್ತಮುತ್ತಲಿನ ನಡೆಯುತ್ತಿರುವ ಕಪ್ಪುಕಲ್ಲಿನ ಕೋರೆಯಲ್ಲಿ ಸ್ಫೋಟಕಗಳನ್ನು ಬಳಸಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಸ್ಥಳೀಯ ಮನೆಯವರು ಆತಂಕದಲ್ಲಿ ಜೀವನ ನಡೆಸುತ್ತಿರುವ ಘಟನೆ ವಿಟ್ಲ ಮತ್ತು ಕೇಪು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ವಿಟ್ಲ ಮತ್ತು ಕೇಪು ಗ್ರಾಮಕ್ಕೆ ಹೊಂದಿಕೊಂಡಿರುವ ವರಪ್ಪಾದೆಯಲ್ಲಿ ಕೇರಳ ಮೂಲದ ಮಾಲಿಕತ್ವದಲ್ಲಿ ನಡೆಯುತ್ತಿರುವ ಕೋರೆಯಿಂದಾಗಿ ಇಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಪ್ರತಿನಿತ್ಯ 50ಕ್ಕೂ ಹೆಚ್ಚು ಭಾರೀ ಗಾತ್ರದ ಲಾರಿಗಳು ವರಪ್ಪಾದೆ ಕೋರೆಯಿಂದ ಕೇರಳಕ್ಕೆ ಎಂ.ಸ್ಯಾಂಡ್ ಮತ್ತು ಜಲ್ಲಿ ಸಾಗಿಸುತ್ತಿವೆ. ಕೇರಳದಲ್ಲಿ ಗಣಿಗಾರಿಕೆಗೆ ಅನುಮತಿ ನೀಡದ ಕಾರಣಕ್ಕಾಗಿ ಅಲ್ಲಿನ ಕೆಲವು ವ್ಯಕ್ತಿಗಳು ಕರ್ನಾಟಕದ ವಿಟ್ಲ ಸುತ್ತಮುತ್ತ ಗಣಿಗಾರಿಕೆ ನಡೆಸುತ್ತಿವೆ. ಸ್ಫೋಟಕ ಬಳಸುವುದು ನಿಷೇಧವಿದ್ದರೂ ಇಲ್ಲಿನ ಕೋರೆ ಮಾಲಿಕರು ಇಲ್ಲಿ ರಾಜಾರೋಷವಾಗಿ ಸ್ಫೋಟಕಗಳನ್ನು ಬಳಸುತ್ತಿದ್ದಾರೆ.
ವರಪ್ಪಾದೆ ಕೋರೆಗೆ ತಾಗಿಕೊಂಡಿರುವ ವಿಟ್ಲ-ಕೇಪು ಸಂಪರ್ಕ ರಸ್ತೆ ಬದಿಯಲ್ಲಿನ ಕೆಲವೊಂದು ಕುಟುಂಬಗಳು ಈಗಾಗಲೇ ಸ್ಫೋಟದ ತೀವ್ರತೆಗೆ ಬೆಚ್ಚಿಬಿದ್ದಿದೆ. ಅನಾರೋಗ್ಯ ಪೀಡಿತೆ ವೃದ್ಧೆ ಜುಬೈದಾ ಇನ್ನೂ ತನ್ನ ಮುರುಕು ಮನೆಯಲ್ಲಿ ಸ್ಫೋಟದ ಕಂಪನಕ್ಕೆ ಬೆದರಿ ಬದುಕುತ್ತಿದ್ದಾರೆ. ಎರಡು ದಿನಕ್ಕೊಮ್ಮೆ ನೂರಕ್ಕೂ ಹೆಚ್ಚು ಸ್ಪೋಟಕ ಸಿಡಿಸುವ ಕ್ವಾರಿ ಮಾಲಿಕರ ದರ್ಪದಿಂದಾಗಿ ವೃದ್ಧೆ ಜುಬೈದಾರ ಮನೆ ಯಾವುದೇ ಕ್ಷಣ ನೆಲಕಚ್ಚುವ ಹಂತದಲ್ಲಿದೆ. ಈ ಬಗ್ಗೆ ಕೋರೆ ಮಾಲೀಕರಲ್ಲಿ ಹಲವು ಬಾರಿ ಮನವಿ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ಜುಬೈದಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಫೋಟದ ಸಂದರ್ಭ ಸುಮಾರು ೫ಕಿಲೋ ಮೀಟರ್ ಪರಿಸರದ ಭೂಮಿ ಕಂಪಿಸುತ್ತಿದ್ದರೂ ಯಾರೂ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೋರೆಯಿಂದ ಗಣಿ ಉತ್ಪನ್ನ ಸಾಗಿಸುತ್ತಿರುವ ನೂರಾರು ಲಾರಿಗಳ ಓಡಾಟದಿಂದ ಕಲ್ಲುರ್ಟಿಯಡ್ಕ-ಗುಂಪಲಡ್ಕ-ಅಜ್ಜಿನಡ್ಕ ಸಂಪರ್ಕ ರಸ್ತೆಯಲ್ಲಿ ಇತರ ಯಾವುದೇ ವಾಹನ ಸಂಚರಿಸುವುದು ಅಸಾಧ್ಯವಾಗಿದೆ. ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಮೌಖಿಕವಾಗಿ ಸ್ಥಳೀಯರು ದೂರು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯವರು ಹಾಗೂ ಬಂಟ್ವಾಳ ತಹಶೀಲ್ದಾರರು ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಕಂಟಕವಾಗಿರುವ ವರಪ್ಪಾದೆ ಕೋರೆ ವಿರುದ್ಧ ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂಬುದು ಸ್ಥಳೀಯರು ಒತ್ತಾಯಿಸಿದ್ದಾರೆ.