ಸುಬ್ರಹ್ಮಣ್ಯ, ಜು 25 (Daijiworld News/RD): ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಪಶ್ಚಿಮ ಘಟ್ಟದ ಸಕಲೇಶಪುರ- ಸುಬ್ರಹ್ಮಣ್ಯ ವಲಯದಲ್ಲಿ ಹಳಿಗಳ ಮೇಲೆ ಬಿದ್ದಿದ್ದ ಭಾರೀ ಗಾತ್ರದ ಬಂಡೆಕಲ್ಲುಗಳನ್ನು ಮತ್ತು ಮಣ್ಣುನ್ನು ತೆರವುಗೊಳಿಸಿ, ಪ್ರಯಾಣಿಕರಿಗೆ ಸುಗಮವಾದ ಸಂಚಾರ ಕಲ್ಪಿಸುವ ಸಲುವಾಗಿ ಈಗಾಗಲೇ ಈ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಗೂಡ್ಸ್ ರೈಲು ಸಂಚರಿಸಿದ್ದು, ಸಕಲೇಶಪುರ-ಸುಬ್ರಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ಪ್ರಯಾಣಿಕ ರೈಲು ಸೇವೆಗಳು ಪುನರಾರಂಭಗೊಂಡಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಹಲವು ಬಾರಿ ರೈಲ್ವೆ ಹಳಿಗಳ ಮೇಲೆ ಕೆಸರು ಮಿಶ್ರಿತ ಮಣ್ಣು ಹಾಗೂ ಬೃಹತ್ ಗಾತ್ರದ ಬಂಡೆ ಉರುಳಲು ಸಿದ್ಧವಾಗಿದ್ದ, ಕಾರಣ ಈ ಮಾರ್ಗದಲ್ಲಿ ಬೆಂಗಳೂರು-ಮಂಗಳೂರು ನಡುವೆ ಓಡಾಡುವ ಎಲ್ಲ ಪ್ಯಾಸೆಂಜರ್ ರೈಲುಗಳನ್ನು ಕಳೆದ ಸ್ಥಗಿತಗೊಳಿಸಲಾಗಿತ್ತು.
ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ಸಿರಿಬಾಗಿಲಿನ ಮಣಿಬಂಡದಲ್ಲಿ ಹಳಿಯ ಮೇಲೆ ಬೀಳಲು ಸಿದ್ಧವಾಗಿದ್ದ ಬಂಡೆಗಳನ್ನು ಈಗಾಗಲೇ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ಗುರುವಾರ ಬೆಳಗ್ಗೆ ಪ್ರಾಯೋಗಿಕವಾಗಿ ಗೂಡ್ಸ್ ರೈಲು ಸಂಚರಿಸಲಿದೆ. ಅನಂತರ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದಿದ್ದಾರೆ.
ಕಳೆದ ಸತತ ಐದು ದಿನಗಳಿಂದ ಬಂಡೆ ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಪ್ರತೀಕೂಲ ಹವಾಮಾನ ಇದ್ದರೂ ಬಂಡೆಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ತೆರೆವು ವೇಳೆ ಮತ್ತಷ್ಟು ಬಂಡೆ ಜೊತೆ ಮಣ್ಣು ಜರಿದು ಹಳಿಯ ಮೇಲೆ ಬಿದ್ದ ಕಾರಣದಿಂದ ಹಗಲು ರಾತ್ರಿಯೆನ್ನದೆ ನಿರಂತರವಾಗಿ ಕೆಲಸ ಮಾಡಿ ಬಂಡೆಗಳನ್ನು ತೆರವುಗೊಳಿಸಿ ಪ್ರಾಯೋಗಿಕವಾಗಿ ಗೂಡ್ಸ್ ರೈಲು ಸಂಚರಿಸಿದ್ದು ಪ್ರಯಾಣಿಕ ರೈಲು ಸೇವೆಗಳು ಮತ್ತೆ ಪುನರಾರಂಭಗೊಂಡಿದೆ.
100ಕ್ಕೂ ಅಧಿಕ ಮಂದಿ ಕಾರ್ಮಿಕರು ಬಂಡೆಯ ತೆರವುಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇಂದಿನಿಂದ ಮುಕ್ತ ಸಂಚಾರ ಆರಂಭಗೊಂಡಿದೆ.