ಮಂಗಳೂರು, ಜು25(Daijiworld News/SS): ದಕ್ಷಿಣ ಕನ್ನಡ, ಉಡುಪಿ ಜಿಲ್ಲಾದ್ಯಂತ ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಿದೆ. ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೇತ್ರಾವತಿ ಸಹಿತ ಪಶ್ಚಿಮಘಟ್ಟದಿಂದ ಹರಿದುಬರುವ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಅಧಿಕ ಮಟ್ಟದಲ್ಲಿ ನೀರು ಹರಿಯುತ್ತಿವೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದ ಸುರಿದ ಮಳೆಯಿಂದಾಗಿ ನದಿಗಳಿಗೆ ನೀರಿನ ಹರಿವು ಹೆಚ್ಚಳವಾಗಿದ್ದು, ಜೀವನದಿಗಳಾದ ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿದಿದೆ. ಉಪ್ಪಿನಂಗಡಿ ಸೇರಿದಂತೆ ಬಂಟ್ವಾಳದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ ಕಂಡಿದೆ.
ಈ ಬಾರಿ ಮುಂಗಾರು ಕರಾವಳಿ ಪ್ರವೇಶ ವಿಳಂಬದಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಶೇ.20ರಷ್ಟು ಮಳೆ ಕೊರತೆಯಾಗಿದೆ. ಆದರೆ ಜೂನ್ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 1ರಿಂದ 21ರ ವರೆಗೆ ಸರಾಸರಿ 599 ಮಿ.ಮೀ.(ವಾಡಿಕೆ 863 ಮಿ.ಮೀ) ಮಳೆಯಾಗಿದೆ. ಆದರೂ ಶೇ.31ರಷ್ಟು ಮಳೆ ಕೊರತೆಯಾಗಿದೆ. ಉಡುಪಿಯಲ್ಲಿ 907 ಮಿ.ಮೀ. (ವಾಡಿಕೆ 989) ಮಳೆಯಾಗಿದೆ. ಶೇ.9ರಷ್ಟು ಮಳೆ ಕೊರತೆಯಾಗಿದೆ. ಜೂನ್ನಲ್ಲಿ ದ.ಕ.ಜಿಲ್ಲೆಯಲ್ಲಿ 425 ಮಿ.ಮೀ. ಉಡುಪಿಯಲ್ಲಿ 634 ಮಿ.ಮೀ. ಮಳೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಉಡುಪಿಯಲ್ಲಿ ಈ ಬಾರಿ ಹೆಚ್ಚು ಮಳೆಯಾಗಿದೆ.