ಕಾಸರಗೋಡು, ಜು 25 (Daijiworld News/RD): ಕಳೆದ ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಗುಡ್ಡ ಕುಸಿತ ಉಂಟಾಗಿದ್ದು, ಕೇರಳ - ಕರ್ನಾಟಕ ಅಂತರ್ ರಾಜ್ಯ ರಸ್ತೆಯಾದ ಕಲ್ಲಡ್ಕ-ಚೆರ್ಕಳ ರಾಜ್ಯ ಹೆದ್ದಾರಿಯ ಬದಿಯಡ್ಕ - ಪೆರ್ಲ ನಡುವೆ ಭೂಕುಸಿತಗೊಂಡಿದೆ.
ಭೂಕುಸಿತದಿಂದಾಗಿ ಬದಿಯಡ್ಕ-ಪೆರ್ಲ ನಡುವೆ ಸಂಚಾರ ಸಂಪೂರ್ಣ ಮೊಟಕುಗೊಂಡಿದ್ದು, ಪೆರ್ಲ , ಪುತ್ತೂರು , ವಿಟ್ಲ ಕಡೆಗೆ ತೆರಳುವ ವಾಹನಗಳು ಕಿಲೋಮೀಟರ್ಗಳಷ್ಟು ಸುತ್ತುವರಿದು ತೆರಳಬೇಕಾದ ಸ್ಥಿತಿ ಒದಗಿದೆ. ಗುಡ್ಡಗಳು ಜರಿದು ಮಣ್ಣು ರಸ್ತೆಗೆ ಕುಸಿದು ಬಂದು ನಿಂತಿದ್ದು, ಮಾತ್ರವಲ್ಲದೆ ರಸ್ತೆಯು ವಿಭಜನೆಗೊಂಡಿರುವ ಘಟನೆ ನಡೆದಿದೆ. ಇದರಿಂದ ಕಳೆದ ಮೂರು ದಿನಗಳಿಂದ ಬದಿಯಡ್ಕ, ಪೆರ್ಲಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಸಂಚಾರ ಮೊಟಕುಗೊಂಡ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಪ್ರಯಾಣಿಕರು ಪರದಾಡುವಂತೆ ಆಗಿದ್ದು, ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಕಿಲೋ ಮೀಟರ್ಗಳಷ್ಟು ಸುತ್ತುವರಿದು ಶಾಲೆಗಳಿಗೆ ತಲುಪಬೇಕಾಗಿದೆ.
ಜೊತೆಗೆ ಕೂಲಿ ಕಾರ್ಮಿಕರು, ದೈನಂದಿನ ದಿನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ ಈ ರೀತಿಯಲ್ಲಿ ಸಂಚರಿಸುವ ದುಃಸ್ಥಿತಿ ಬಂದಿದೆ. ಕಾಸರಗೋಡಿನಿಂದ ಪುತ್ತೂರಿಗೆ ತೆರಳುವ ಬಸ್ಸುಗಳು ಬದಿಯಡ್ಕದಿಂದ ಕನ್ಯಪ್ಪಾಡಿ, ಏಲ್ಕಾನ, ಉಕ್ಕಿನಡ್ಕ ವೈದ್ಯಕೀಯ ಕಾಲೇಜು ರಸ್ತೆಯಾಗಿ ಸುಮಾರು ಹತ್ತು ಕಿ.ಮೀ ಗಳಷ್ಟು ಸುತ್ತು ಬಂದು ಸಂಚಾರ ನಡೆಸುವಂತಾಗಿದೆ. ಕಾಸರಗೋಡಿನಿಂದ ಪೆರ್ಲಕ್ಕೆ ತೆರಳುವ ಖಾಸಗಿ ಬಸ್ಗಳು ಬದಿಯಡ್ಕದವರೆಗೆ ಸಂಚರಿಸಿ ವಾಪಸಾಗುತ್ತಿವೆ.
ಚೆರ್ಕಳ-ಕಲ್ಲಡ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯೇ ಈ ಅವ್ಯವಸ್ಥೆಗೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ರಸ್ತೆಯ ಬದಿಯನ್ನು ಅಗಲಗೊಳಿಸಲಾಗಿದ್ದು, ಚರಂಡಿ ವ್ಯವಸ್ಥೆ ಹಾಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಈ ದುರಂತಕ್ಕೆ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ.
ಮಳೆ ಇನ್ನಷ್ಟು ಬಿರುಸುಗೊಂಡಲ್ಲಿ ಗುಡ್ಡ ಇನ್ನಷ್ಟು ಕುಸಿಯುವ ಭೀತಿ ಕೂಡಾ ಉಂಟಾಗಿದೆ. ಗುಡ್ಡ ಕುಸಿತ ಮಾತ್ರವಲ್ಲದೆ, ರಸ್ತೆಯ ಹಲವೆಡೆ ಮರಗಳು ಉರುಳಿ ಬೀಳತೊಡಗಿದ್ದು, ಸಂಚಾರವೇ ದುಸ್ತರವಾಗುತ್ತಿದೆ. ದಿನಂಪ್ರತಿ ನೂರಾರು ಬಸ್ಸುಗಳು, ಖಾಸಗಿ ವಾಹನಗಳು, ಸಾವಿರಾರು ಮಂದಿ ಸಂಚಾರ ನಡೆಸುವ ಅಂತರ್ರಾಜ್ಯ ರಸ್ತೆ ಬಂದ್ ಆಗಿರುವುದು ಸಮಸ್ಯೆಗೆ ಕಾರಣವಾಗಿದೆ.