ಮಂಗಳೂರು, ಜು 25(Daijiworld News/MSP): ಮಂಗಳೂರು ಮೂಲದ ಹೋಟೆಲ್ ಉದ್ಯಮಿ ಸುರೇಶ್ ನೂಜಾಜೆ ಎಂಬುವರನ್ನು ಕೊಲೆ ಮಾಡಿದ ಆರೋಪಿಗಳನ್ನು ಶಹಾಪುರ ಠಾಣೆಯ ಪೊಲೀಸರು ಮೂರೇ ದಿನದಲ್ಲಿ ಬಂಧಿಸಿದ್ದಾರೆ.
ಇವರು ಕಳೆದ ಜುಲೈ 19ರಂದು ಥಾಣೆ ಸಮೀಪದ ಶಹಾಪುರ ಎಂಬಲ್ಲಿ ತನ್ನದೇ ಫಾರ್ಮ್ ಹೌಸ್ನಲ್ಲಿಯೇ ಕೊಲೆಯಾಗಿ ಪತ್ತೆಯಾಗಿದ್ದರು. ಪ್ರಕರಣದ ಆರೋಪಿಗಳಾದ ಅನಿಲ್ ಸಾಲುಂಕೆ (32), ಸಂತೋಷ್ ಸಾಲುಂಕೆ (35), ರೋಹಿತ್ ಪಿಂಪಲ್ (19), ಚಮನ್ ಚೌಹಾಣ್ (25) ಅವರನ್ನು ಶಹಾಪುರ ಆಸ್ಪತ್ರೆಯ ಬಳಿಯ ಹಳೆಯ ಕಟ್ಟಡದಿಂದ ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಮೂಲದವರು ಎಂದು ಹೇಳಲಾಗಿದೆ. ಇವರೆಲ್ಲರೂ ದರೋಡೆಯನ್ನೇ ತಮ್ಮ ವೃತ್ತಿಯನ್ನಾಗಿಸಿದವರು ಎನ್ನಲಾಗಿದೆ.
ಥಾಣೆಯ ಶಹಾಪುರ ಸಮೀಪದ ಸುರೇಶ್ ನೂಜಾಜೆ ಅವರ ಫಾರ್ಮ್ ಹೌಸ್ನಲ್ಲಿ ದರೋಡೆ ಮಾಡಲು ಸಂಚು ಹೂಡಿದ್ದರು. ಆದರೆ ಅಂದೇ ಸುರೇಶ್ ನೂಜಾಜೆ ಅವರ ಸಾಕು ನಾಯಿ ಅಸ್ವಸ್ಥಗೊಂಡ ಕಾರಣ ಅದನ್ನು ನೋಡಲೆಂದು ಅಲ್ಲಿಗೆ ಬಂದಿದ್ದರು. ಈ ಸಂದರ್ಭ ದಾಳಿ ನಡೆಸಿದ ದರೋಡೆಕೋರರು ಸುರೇಶ್ ಅವರನ್ನು ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ದಾಳಿಯ ಪರಿಣಾಮ ಗಂಭೀರ ಗಾಯಗೊಂಡ ಅಲ್ಲೇ ಮೃತಪಟ್ಟಿದ್ದರು. ಬಳಿಕ ದರೋಡೆಕೋರರು ಫಾರ್ಮ್ ಹೌಸ್ ಚಿನ್ನಾಭರಣ , ನಗದು ದರೋಡೆ ಮಾಡಿ ಪರಾರಿಯಾಗಿದ್ದರು.
ಮಂಗಳೂರು ಮೂಲದವರಾಗಿದ್ದ ಸುರೇಶ್ ನೂಜಾಜೆ ನವೀ ಮುಂಬಯಿಯಲ್ಲಿ ಹೋಟೆಲ್ ಹಾಗೂ ದುಬೈನಲ್ಲಿ ರೆಸ್ಟೊರೆಂಟ್ ನ ಮಾಲೀಕರಾಗಿದ್ದಾರೆ.