ಮೂಡುಬಿದಿರೆ, ಜು25(Daijiworld News/SS): ಬ್ಯಾಂಕ್ನಿಂದ ತಾನು ಪಡೆದ ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್ನವರು ತೋರಿಸಿ, ಅಡವಿಟ್ಟಿದ್ದ ನನ್ನ ಆಸ್ತಿಯನ್ನು ಏಲಂ ಮಾಡಿರುವುದಾಗಿ ಆರೋಪಿಸಿ ಸಾಲಗಾರರೊಬ್ಬರು ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ ಎದುರು ಉಪವಾಸ ಸತ್ಯಾಗ್ರಹ ನಡೆಸಿದ ಘಟನೆ ನಡೆದಿದೆ.
ಶಿರ್ತಾಡಿ ನಿವಾಸಿ ರವಿರಾಜ್ ಹೆಗ್ಡೆ ಎಂಬವರು ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ನಿಂದ ಸಾಲವನ್ನು ಐದು ವರ್ಷದ ಹಿಂದೆ ಪಡೆದಿದ್ದು, ಅದನ್ನು ಮರುಪಾವತಿಸದೇ ಇರುವುದರಿಂದ ಬ್ಯಾಂಕ್ ಸಹಕಾರಿ ಉಪನಿಂಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಬಳಿಕ ನ್ಯಾಯಾಲಯವು ಆಡವಿಟ್ಟಿದ್ದ ಆಸ್ತಿಯನ್ನು ಏಲಂ ಮಾಡಿತ್ತು. ಆದರೆ ಜಿ.24ರಂದು ರವಿರಾಜ್ ಹೆಗ್ಡೆ ತನಗೆ ಅನ್ಯಾಯವಾಗಿದೆ ಎಂದು ಬ್ಯಾಂಕ್ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಬ್ಯಾಂಕ್ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ರವಿರಾಜ್ ಅವರು ಸೂಕ್ತ ದಾಖಲೆಯನ್ನಿಟ್ಟು ಸಾಲ ಪಡೆದಿದ್ದು ಮರುಪಾವತಿಸದೇ ಇರುವುದರಿಂದ ಬ್ಯಾಂಕ್ ಕಾನೂನು ಕ್ರಮ ಕೈಗೊಂಡಿದೆ. ಬ್ಯಾಂಕ್ ಅವರಿಗೆ ಅನ್ಯಾಯವೆಸಗಿಲ್ಲ ಎಂದು ತಿಳಿಸಿದ್ದಾರೆ.