ಉಳ್ಳಾಲ, ಜು 24 (Daijiworld News/SM): ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿ ಬಗಂಬಿಲ ನಿವಾಸಿ ಧೀಕ್ಷಾ(22) ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ ಆಕೆಯನ್ನು ವಾರ್ಡ್ ಗೆ ಬುಧವಾರ ಸ್ಥಳಾಂತರಿಸಲಾಗಿದೆ.
ಜೂನ್ 29 ರಂದು ಶಕ್ತಿನಗರ ನಿವಾಸಿ ಸುಶಾಂತ್ ಎಂಬ ಯುವಕ, ದೀಕ್ಷಾ ತನ್ನ ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಗೆ 12 ಬಾರಿ ನಡು ರಸ್ತೆಯಲ್ಲಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಬಳಿಕ ತನ್ನ ಕುತ್ತಿಗೆ ಭಾಗಕ್ಕೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಶಾಂತ್ ಎರಡೇ ದಿನದಲ್ಲಿ ಚೇತರಿಸಿಕೊಂಡಿದ್ದು, ಉಳ್ಳಾಲ ಪೊಲೀಸರು ಸಂಪೂರ್ಣ ಚೇತರಿಸಿಕೊಂಡ ಎಂಟು ದಿನಗಳ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ , ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
10 ದಿನಗಳ ಕಾಲ ದೀಕ್ಷಾ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲೇ ಮುಂದುವರಿದಿತ್ತು. ಘಟನೆ ನಡೆದು 25 ದಿನಗಳ ಬಳಿಕ ಇದೀಗ ದೀಕ್ಷಾ ಆರೋಗ್ಯ ಸ್ಥಿತಿಯಲ್ಲಿ ಬಹಳ ಸುಧಾರಣೆಯಾಗಿದೆ. ವಾರ್ಡಿಗೆ ಸ್ಥಳಾಂತರಗೊಳಿಸಲಾಗಿದ್ದು, ಆಹಾರವನ್ನು ಸೇವಿಸುತ್ತಿದ್ದಾಳೆ. ದೇಹದೊಳಗಿನ ಗಾಯ ಮಾಸುವವರೆಗೆ ಚಿಕಿತ್ಸೆ ಮುಂದುವರಿಯಲಿದೆ.
ಸಾಹಸ ಮೆರೆದ ನರ್ಸ್ಗೆ ಪ್ರಶಸ್ತಿ:
ಸುಶಾಂತ್ , ದೀಕ್ಷಾಳಿಗೆ ಚೂರಿ ಇರಿಯುವ ಸಂದರ್ಭ ಘಟನೆ ತಡೆಯುವ ಯತ್ನ ಸ್ಥಳೀಯರಿಂದ ನಡೆಯಲಿಲ್ಲ. ಜೀವ ಭಯದಿಂದ ಯಾರೂ ಕೂಡ ಅಲ್ಲಿಗೆ ತೆರಳಿರಲಿಲ್ಲ. ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಹಿಂಭಾಗದಲ್ಲೇ ಘಟನೆ ನಡೆದಿತ್ತು. ಆಸ್ಪತ್ರೆ ಅಧಿಕೃತರ ಆದೇಶದಂತೆ ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್ ಮೂಲಕ ತೆರಳಿದ್ದ ಆಸ್ಪತ್ರೆಯ ದಾದಿ ನಿಮ್ಮಿ, ಸುಶಾಂತ್ ಕೃತ್ಯವನ್ನು ತಡೆದು ಚೂರಿಯನ್ನು ಆತನ ಕೈಯಿಂದ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಬಳಿಕ ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದಾಗಿ ಅತಿ ಹೆಚ್ಚು ಗಾಯಗೊಂಡಿದ್ದ ದೀಕ್ಷಾ ಬದುಕುಳಿದಿದ್ದಾಳೆ. ನರ್ಸ್ ನಿಮ್ಮಿ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಆಸ್ಪತ್ರೆಯಿಂದ ಮೊಬೈಲ್ ಮೂಲಕ ಚಿತ್ರೀಕರಣ ನಡೆಸಿದ್ದ ಫಲವಾಗಿ ನರ್ಸ್ ಸಾಹಸ ಬೆಳಕಿಗೆ ಬಂದಿತ್ತು. ಇದೀಗ ನರ್ಸ್ ನಿಮ್ಮಿ ಅವರ ಸಾಹಸವನ್ನು ಗುರುತಿಸಿ ರಾಜ್ಯಮಟ್ಟದ `ನ್ಯಾಷನಲ್ ಫ್ಲಾರೆನ್ಸ್ ಆಫ್ ನೈಟಿಂಗೇಲ್' ಅನ್ನುವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮುಂದಿನ ವಾರದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.