ಉಡುಪಿ, ಜು 24 (Daijiworld News/SM): ಮಲ್ಪೆ ಖಾಸಗಿ ಬಸ್ ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದ ಬೈರಂಪಳ್ಳಿ ಗ್ರಾಮದ ದೂಪದಕಟ್ಟೆಯ ಪ್ರಶಾಂತ ಪೂಜಾರಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಸಚಿನ್ ನಾಯ್ಕ್ ಬಂಧಿತ ಆರೋಪಿಯಾಗಿದ್ದಾನೆ.
ಸಚಿನ್ ಪತ್ತೆಯ ಕುರಿತು ಬ್ರಹ್ಮಾವರ ವೃತ್ತ ನಿರೀಕ್ಷಕರು ಮತ್ತು ಹಿರಿಯಡ್ಕ ಠಾಣಾ ಪಿಎಸ್ಐರವರು ಮಾಹಿತಿ ಸಂಗ್ರಹಿಸುತ್ತಿದ್ದರು. ಜುಲೈ 23ರಂದು ಆರೋಪಿ ಬೆಳ್ತಂಗಡಿ ತಾಲೂಕಿನ ವೇಣೂರು ಮೂರ್ಜೆ ಕ್ರಾಸ್ ಬಳಿ ಬಸ್ಸು ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಧಿತ ಸಚಿನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 4 ದಿವಸಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಇನ್ನು ತಿಂಗಳ ಹಿಂದೆ ರಾತ್ರಿಯ ಸುಮಾರು 12 ಗಂಟೆಯ ಸಮಯದಲ್ಲಿ ಇಬ್ಬರು ಯುವಕರು ಪ್ರಶಾಂತ ಪೂಜಾರಿಯ ಮನೆಗೆ ಬಂದು ಪ್ರಶಾಂತ್ ರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದರು. ಬಳಿಕ ಆರೋಪಿಗಳು ಬಂದ ದ್ವಿಚಕ್ರ ವಾಹನವನ್ನು ಅಲ್ಲೇ ಸ್ವಲ್ಪ ದೂರದಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿ ರಕ್ಷಕ್ (19) ಎಂಬಾತನನ್ನು ಈ ಹಿಂದೆಯೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಯು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪ್ರಕರಣ ವರದಿಯಾದಂದಿನಿಂದ ಆರೋಪಿ ಸಚಿನ್ ನಾಯ್ಕ್ ತಲೆ ಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಹಣಕಾಸಿನ ವಿಚಾರದಲ್ಲಿ ಉಂಟಾದ ವೈಮನಸ್ಸಿನಿಂದಾಗಿ ಆರೋಪಿಗಳು ಈ ಕೃತ್ಯ ನಡೆಸಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.