ಬಂಟ್ವಾಳ, ಜು 24 (Daijiworld News/SM): ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ನೇತ್ರಾವತಿ ಮೈದುಂಬಿ ಹರಿಯುತ್ತಿದ್ದಾಳೆ.
ಮಂಗಳವಾರ ಸಂಜೆಯ ವೇಳೆಗೆ 5.1 ಮೀಟರ್ ಮುಟ್ಟಿದ್ದ ನೀರಿನ ಮಟ್ಟ ಬುಧವಾರದಂದು 5.6 ಮೀಟರ್ ಗೆ ಏರಿಕೆ ಯಾಗಿತ್ತು. ಬೆಳಿಗ್ಗೆ ಯಿಂದ ಕೊಂಚ ಮಳೆ ಕಡಿಮೆಯಾಗಿದ್ದರಿಂದ ನೀರಿನ ಮಟ್ಟ ಇಳಿಕೆಯಾಗಿದೆ. ಕಳೆದ ಬಾರಿ ಈ ಸಮಯದಲ್ಲಿ ಎರಡು ಬಾರಿ ನೆರೆ ಬಂದಿತ್ತು. ನೇತ್ರಾವತಿ ನದಿಯ ನೀರಿನ ಮಟ್ಟ ಅಪಾಯದ ಮಟ್ಟಕ್ಕೆ ತಲುಪಿತ್ತು.
ಆದರೆ ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ನೇತ್ರಾವತಿ ನದಿ ಸರಿಯಾಗಿ ತುಂಬಿಲ್ಲ.ಅಲ್ಲಲ್ಲಿ ಮರಳು ದಿಬ್ಬಗಳು ಕಾಣುತ್ತಿದ್ದು ಕರಾವಳಿಯ ಜನರು ನೀರಿನ ಅಭಾವ ತಲೆದೋರುತ್ತದೆ ಎಂಬ ಭೀತಿಯಲ್ಲಿದ್ದರು. ಆದರೆ ಕಳೆದ ಎರಡು ದಿನಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನತೆ ಕೊಂಚ ರಿಲೀಫ್ ಅಗಿದ್ದಾರೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಲು ಮಳೆ ಅನುಕೂಲವಾಗಿದೆ.