ಕುಂದಾಪುರ, ಜು 24 (Daijiworld News/MSP): ಶ್ರೀಲಂಕಾ ಪ್ರಧಾನ ಮಂತ್ರಿ ರಾನಿಲ್ ವಿಕ್ರಂಸಿಂಘೆ ಅವರು ಜುಲೈ 26 ರಂದು ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆ ಆಗಮಿಸಲಿದ್ದಾರೆ ಎಂದು ದೇವಸ್ಥಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಕ್ರಂ ಸಿಂಘೆ ಆಗಮನದ ಪ್ರಯುಕ್ತ ಭದ್ರತಾ ಹಿತದೃಷ್ಟಿಯಿಂದ ಜುಲೈ 26 ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30ರ ವರೆಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1977 ರಲ್ಲಿ ಬಿಯಾಗಾಮ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ರಾನಿಲ್ ವಿಕ್ರಮಸಿಂಘೆ, 1993 ರಿಂದ 1994 ಮತ್ತು 2001 ರಿಂದ 2004 ರವರೆಗೆ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. 1994 ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಮಯದಲ್ಲಿ ಗಾಮಿನಿ ದಿಸನಾಯಕ ಅವರ ಹತ್ಯೆಯ ನಂತರ ನವೆಂಬರ್ 1994 ರಲ್ಲಿ ಪಕ್ಷದ ನಾಯಕರಾಗಿ ಆಯ್ಕೆಯಾದರು. 2015 ರ ರಾಷ್ಟ್ರಪತಿ ಚುನಾವಣೆಯಲ್ಲಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಸೋಲಿಸಿದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು 8 ಜನವರಿ 2015 ರಂದು ವಿಕ್ರಮಸಿಂಘೆ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಿದ್ದರು.
ವಿಕ್ರಮಸಿಂಘೆ ಅವರ ಸಮ್ಮಿಶ್ರ ಮೈತ್ರಿ, ಯುನೈಟೆಡ್ ನ್ಯಾಷನಲ್ ಫ್ರಂಟ್ ಫಾರ್ ಗುಡ್ ಗವರ್ನೆನ್ಸ್, 2015ರ ಸಂಸತ್ ಚುನಾವಣೆಯಲ್ಲಿ 106ಸ್ಥಾನಗಳನ್ನು ಗೆದ್ದು, ಬಹುಮತದ ಕೊರತೆ ಕಂಡರೂ ಮತ್ತೆ ಅವರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. 26 ಅಕ್ಟೋಬರ್ 2018 ರಂದು ಮಾಜಿ ರಾಷ್ಟ್ರಪತಿ ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಮಂತ್ರಿಯನ್ನಾಗಿ ನೇಮಕ ಮಾಡುವ ಮೂಲಕ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ತೆಗೆದುಹಾಕಿದರು, ಈ ಸಂದರ್ಭ ಶ್ರೀಲಂಕಾದಲ್ಲಿ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಯಿತು. ಬಳಿಕ 16 ಡಿಸೆಂಬರ್ 2018 ರಂದು ಮತ್ತೆ ವಿಕ್ರಮಸಿಂಘೆ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡುವುದರೊಂದಿಗೆ ಸಾಂವಿಧಾನಿಕ ಬಿಕ್ಕಟ್ಟು ಕೊನೆಗೊಂಡಿತ್ತು. ಇದೀಗ ಸಿಂಘೆ ಕೊಲ್ಲೂರು ಭೇಟಿ ಮಹತ್ವ ಪಡೆದುಕೊಂಡಿದೆ.