ಮಂಗಳೂರು, ಜು 24 (Daijiworld News/RD): ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನಗೊಂಡಿದ್ದು, ಬಿಜೆಪಿ ಪಕ್ಷವೂ ಆಡಳಿತ ನಡೆಸಲು ಸಜ್ಜಾಗಿ ನಿಂತಿದೆ. ವಿಧಾನಸಭಾ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವ ಮೂಲಕ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿ, ಸಚಿವ ಸಂಪುಟ ರಚಿಸಲು ತಯಾರು ನಡೆಸಿದೆ. ಕರಾವಳಿಯಲ್ಲಿ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದರೂ ಸಹ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಯು.ಟಿ.ಖಾದರ್ ಅವರಿಗೆ ಸಚಿವ ಸ್ಥಾನ ದೊರಕಿತ್ತು. ಆದರೆ ರಾಜ್ಯದಲ್ಲಿ ದೋಸ್ತಿ ಸರ್ಕಾರ ಈಗಾಗಲೇ ನೆಲಕಚ್ಚಿದ್ದು, ಬಿಜೆಪಿ ಅಧಿಕಾರ ರೂಪಿಸುವ ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಕರಾವಳಿಯ ಶಾಸಕರಿಗೆ ಸಚಿವ ಸ್ಥಾನ ದೊರಕುವ ಅವಕಾಶ ಒದಗಿ ಬಂದಿದೆ. ಹಾಗಾಗಿ ಒಟ್ಟು 13 ಶಾಸಕರ ಪೈಕಿ ಇದ್ದು, ಎಷ್ಟು ಮಂದಿ ಶಾಸಕರಿಗೆ ಸಚಿವ ಸ್ಥಾನದ ಅದೃಷ್ಟ ಒಲಿಯಲಿದೆ ಎಂಬ ವಿಚಾರ ಮೊಳಕೆಯೊಡೆದಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷವೂ ಅತ್ಯಧಿಕ ಮತಗಳಿಂದ, ಜನಮನ್ನಣೆ ಪಡೆದಿದ್ದು, ಬಿಜೆಪಿಯನ್ನು ಬಲಿಷ್ಠಗೊಳಿಸಿ ಹೊಸ ಇತಿಹಾಸ ಸೃಷ್ಠಿಸಿ ದೇಶಕ್ಕೆ ಮಾದರಿಯಾದದ್ದು ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ. ಇಲ್ಲಿನ ಜನರ ಅಧಿಕ ಮತ ಬಿಜೆಪಿ ಪಕ್ಷಕ್ಕೆ ಗಟ್ಟಿಯಾದ ಅಡಿಪಾಯ ಹಾಕಿತು.
ದಕ್ಷಿಣ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ 13 ಶಾಸಕ ಸ್ಥಾನಗಳ ಪೈಕಿ ಬಿಜೆಪಿಯ 12 ಮಂದಿ ಶಾಸಕರು ಮತ್ತು ಒರ್ವ ವಿಧಾನಸಭಾ ಪರಿಷತ್ ಸದಸ್ಯರಿದ್ದಾರೆ. 6 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ಎಸ್. ಅಂಗಾರ ಬಿಜೆಪಿಯ ಹಿರಿಯ ಶಾಸಕರಾಗಿದ್ದಾರೆ. ಪುತ್ತೂರು ಬಿಜೆಪಿಯ ಹಿರಿಯ ನಾಯಕ ಸಂಜೀವ ಮಠಂದೂರು ಹೊಸ ಶಾಸಕರೂ ಹೌದು.
ಉಡುಪಿ ಜಿಲ್ಲೆಯಲ್ಲಿ ಸುಕುಮಾರ ಶೆಟ್ಟಿ ಹೊರತುಪಡಿಸಿದರೆ ಉಳಿದ ನಾಲ್ವರೂ ಹಿರಿಯ ಶಾಸಕರು, 5 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಇವರ ಪೈಕಿ ಅತ್ಯಂತ ಹಿರಿಯರು. ಉಳಿದಂತೆ ಕಾರ್ಕಳದ ಸುನಿಲ್ ಕುಮಾರ್, ರಘುಪತಿ ಭಟ್, ಲಾಲಾಜಿ ಮೆಂಡನ್ ಇವೆರೆಲ್ಲಾ ಮೂರು ಬಾರಿ ವಿಜಯಶಾಲಿಗಳಾಗುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮೈತ್ರಿ ಸರ್ಕಾರದ ಆಡಳಿತದ ಅವಧಿಯಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಸುನಿಲ್ ಕುಮಾರ್ ಆಯ್ಕೆಯಾಗಿದ್ದು, ಇವರ ಜೊತೆಗೆ ಕೋಟ ಶ್ರೀನಿವಾಸ ಪೂಜಾರಿಯೂ ಸಹ ವಿಪಕ್ಷ ನಾಯಕರಾಗಿದ್ದರು. ಈ ಹಿಂದೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಅಧಿಕಾರ ಕೈ ತಪ್ಪಿ ಹೋದ ಹಿನ್ನೆಲೆಯಲ್ಲಿ ರಾಜಕೀಯದಿಂದ ದೂರ ಸರಿದ ಇವರು ಸಚಿವ ಸ್ಥಾನದ ಆಕಾಂಕ್ಷಿ.
ಈ ಹಿನ್ನೆಲೆಯಲ್ಲಿ ಗಮನಿಸಿದಾಗ 6 ಬಾರಿ ಬಹುಮತದ ಮೂಲಕ ಸುಳ್ಯ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಎಸ್. ಅಂಗಾರ ರಾಜ್ಯದ ಸಚಿವ ಸ್ಥಾನ ನೀಡುವ ಎಲ್ಲಾ ಅರ್ಹತೆ ಇದೆ ಎಂಬುವುದು ಮೇಲ್ನೋಟಕ್ಕೆ ತಿಳಿದುಕೊಳ್ಳಬಹುವುದು. ಆದರೆ ಕಾರ್ಕಳ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ವಿಜಯ ಸಾಧಿಸಿದ ಸುನಿಲ್ ಕುಮಾರ್ ವರಿಷ್ಠ ವಲಯದಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಇನ್ನುಳಿದಂತೆ ರಘುಪತಿ ಭಟ್, ಲಾಲಾಜಿ ಮೆಂಡನ್ ಹಿರಿಯ ಶಾಸಕರಾಗಿದ್ದು, ಹಿರಿಯ ನಾಯಕರ ಪೈಕಿ ಇವರಿಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ಇದೆ. ಇನ್ನೂ ಹೊಸ ಶಾಸಕರಿಗೆ ಅವಕಾಶ ನೀಡುವುದಾದರೆ ಸಂಜೀವ ಮಠಂದೂರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುತ್ತಾರೆ. ರಾಜ್ಯ ಸಚಿವ ಸಂಪುಟದಲ್ಲಿ ಒಟ್ಟು 34 ಸಚಿವ ಸ್ಥಾನಗಳು ಇವೆ.